
ಬೆಂಗಳೂರು: ನಗರದಲ್ಲಿ ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಜೋಡಿಯ ಜಗಳ ದುರಂತ ಅಂತ್ಯ ಕಂಡ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜೀವಿನಿ ನಗರದಲ್ಲಿ ನಡೆದಿದೆ. ಮೇಘಾಲಯ ಮೂಲದ 34 ವರ್ಷದ ಅಗತ ಬೈತಿಯಂಗುಂ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಅಗತ ಬೈತಿಯಂಗುಂ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದು, ಮಣಿಪುರ ಮೂಲದ ನವಾಜ್ ಶರೀಫ್ (26) ಜೊತೆ ಕಳೆದ ಮೂರು ವರ್ಷಗಳಿಂದ ಲಿವಿನ್ ರಿಲೇಷನ್ಶಿಪ್ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಇಬ್ಬರ ನಡುವೆ 8 ವರ್ಷಗಳ ವಯಸ್ಸಿನ ಅಂತರವಿದ್ದು, ಈ ವಿಚಾರವಾಗಿ ಆಗಾಗ್ಗೆ ಜಗಳವಾಗುತ್ತಿತ್ತೆಂದು ತಿಳಿದುಬಂದಿದೆ.
ಪ್ರಿಯಕರ ಯಾರೊಂದಿಗಾದರೂ ಫೋನ್ನಲ್ಲಿ ಮಾತನಾಡಿದರೂ ಅಗತ ಅನುಮಾನ ಪಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಬುಧವಾರ ರಾತ್ರಿ ನವಾಜ್ ಶರೀಫ್ ತನ್ನ ತಾಯಿಯ ಜೊತೆ ಫೋನ್ನಲ್ಲಿ ಮಾತನಾಡುತ್ತಿದ್ದ ವೇಳೆ, ಬೇರೆ ಯುವತಿಯ ಜೊತೆ ಮಾತನಾಡುತ್ತಿದ್ದೀಯೆಂದು ಅಗತ ಜಗಳ ತೆಗೆದಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.
ಜಗಳ ತಾರಕಕ್ಕೇರುತ್ತಿದ್ದಂತೆ ನವಾಜ್ ಶರೀಫ್ ಮನೆಯಿಂದ ಹೊರಗೆ ಹೋಗಿದ್ದಾನೆ. ಬಳಿಕ ಮನೆಗೆ ಮರಳಿದಾಗ ಅಗತ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕೊಡಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಅನುಮಾನದ ಸುಳಿಗೆ ಸಿಲುಕಿ ಮೂರು ವರ್ಷಗಳ ಸಂಬಂಧ ದುರಂತ ಅಂತ್ಯ ಕಂಡಿರುವುದು ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.

