
ಬೆಂಗಳೂರು ನಗರದಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನಾಗಿದ್ದ ಚಂದ್ರೇಗೌಡ ಎಂಬಾತ ಹಲವು ಮಹಿಳೆಯರಿಗೆ ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾನೆ.
ಆರೋಪಿ ಮಹಿಳೆಯರ ಖಾಸಗಿ ಕ್ಷಣಗಳ ವಿಡಿಯೋ ಮತ್ತು ಫೋಟೋಗಳನ್ನು ಸಂಗ್ರಹಿಸಿಕೊಂಡು, ಅವುಗಳನ್ನು ಬಳಸಿ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ. ಪೊಲೀಸ್ ಅಧಿಕಾರಿ, ವಕೀಲ ಹಾಗೂ ಮಾಧ್ಯಮ ಪ್ರತಿನಿಧಿ ಎಂದು ನಕಲಿ ಪರಿಚಯ ನೀಡಿ ಮಹಿಳೆಯರನ್ನು ಮೋಸಗೊಳಿಸುತ್ತಿದ್ದ ಎನ್ನಲಾಗಿದೆ.
ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬಳಿಗೆ “ನಿನ್ನನ್ನು ಮದುವೆಯಾಗುತ್ತೇನೆ” ಎಂದು ನಂಬಿಸಿ ಆಕೆಯ ಜೊತೆ ಸಂಬಂಧ ಬೆಳೆಸಿದ್ದ ಆರೋಪಿಯು, ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡಿದ್ದ. ಬಳಿಕ ಅದನ್ನೇ ಇಟ್ಟುಕೊಂಡು ಮಹಿಳೆಗೆ ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂತ್ರಸ್ತೆ ಆರೋಪಿಯ ಮೊಬೈಲ್ ಪರಿಶೀಲಿಸಿದಾಗ 20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ, ಫೋಟೋ ಮತ್ತು ಚಾಟಿಂಗ್ ಪತ್ತೆಯಾಗಿದ್ದು, ಬೆಚ್ಚಿಬಿದ್ದ ಆಕೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಆರ್.ಆರ್.ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

