‘ಧುರಂಧರ್ 2’ ಕತೆ ಕದ್ದ ಆರೋಪ | ಆದಿತ್ಯ ಧರ್ ವಿರುದ್ಧ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಎರಡೂ ಸಿನಿಮಾಗಳ ಒಟ್ಟು ಕಲೆಕ್ಷನ್ 3000 ಕೋಟಿ ರೂಪಾಯಿ ದಾಟಿದೆ. ಆದರೆ ಇದೇ ಸಮಯದಲ್ಲಿ ಸಿನಿಮಾ ನಿರ್ದೇಶಕ ಆದಿತ್ಯ ಧರ್ ವಿರುದ್ಧ ಕತೆ ಕದ್ದ ಆರೋಪ ಕೇಳಿಬಂದಿದೆ.

ಕರ್ನಾಟಕದ ಸಂತೋಶ್ ಕುಮಾರ್ ಎಂಬುವರು, ‘ಡಿ ಸಾಹೇಬ್’ ಹೆಸರಿನ ಕಥೆಯನ್ನು ತಾವು ಈಗಾಗಲೇ ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್‌ನಲ್ಲಿ ನೋಂದಾಯಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅವರ ಪ್ರಕಾರ, ‘ಧುರಂಧರ್ 2’ ಸಿನಿಮಾ ತಮ್ಮ ಕಥೆಯನ್ನು ನಕಲು ಮಾಡಿ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಂತೋಶ್ ಕುಮಾರ್ ಅವರು ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ, ‘ಧುರಂಧರ್ 2’ ಸಿನಿಮಾಗೆ ನೀಡಿರುವ ಸಿಬಿಎಫ್‌ಸಿ ಪ್ರಮಾಣ ಪತ್ರವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು.

ಆದರೆ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸಿನಿಮಾದ ಸಿಬಿಎಫ್‌ಸಿ ಪ್ರಮಾಣ ಪತ್ರ ರದ್ದುಪಡಿಸಲು ನಿರಾಕರಿಸಿದೆ. ಈ ಮೂಲಕ ಸಿನಿಮಾ ಪ್ರದರ್ಶನಕ್ಕೆ ಯಾವುದೇ ತಡೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಇನ್ನೊಂದೆಡೆ, ಕೃತಿಚೌರ್ಯದ ಆರೋಪದ ಹಿನ್ನೆಲೆ ನಿರ್ದೇಶಕ ಆದಿತ್ಯ ಧರ್ ಅವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ನ್ಯಾಯಾಲಯವು ಸಂತೋಶ್ ಕುಮಾರ್ ಅವರು ಆದಿತ್ಯ ಧರ್ ವಿರುದ್ಧ ಸಾರ್ವಜನಿಕ ಹೇಳಿಕೆಗಳನ್ನು ನೀಡಬಾರದು ಎಂದು ಸೂಚನೆ ನೀಡಿದೆ.

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳಲ್ಲಿ ಭಾರತೀಯ ಸೈನಿಕನೊಬ್ಬ ಪಾಕಿಸ್ತಾನಕ್ಕೆ ತೆರಳಿ ಉಗ್ರರ ವಿರುದ್ಧ ಹೋರಾಡುವ ಕಥಾಹಂದರವನ್ನು ತೋರಿಸಲಾಗಿದೆ. ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಆರ್. ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *