
ಕುಣಿಗಲ್ ಬಳಿ ಭೀಕರ ಅಪಘಾತ – ಬೆಂಗಳೂರಿನ ತಾಯಿ, ಮಗಳು ದುರ್ಮರಣ
ಕುಣಿಗಲ್:
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಉರ್ಕೆಹಳ್ಳಿ ಬಳಿ ನಡೆದಿದೆ.
ಬೆಂಗಳೂರಿನ ನಿವಾಸಿಗಳಾದ ಜಯಮಾಲಾ (60) ಹಾಗೂ ಅವರ ಮಗಳು ರಾಜೇಶ್ವರಿ (40) ಮೃತಪಟ್ಟ ದುರ್ದೈವಿಗಳು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲತಃ ರಾಯಚೂರು ಜಿಲ್ಲೆಯವರಾದ ಜಯಮಾಲಾ ಅವರು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಮಗಳು ರಾಜೇಶ್ವರಿ ಜೊತೆ ವಾಸವಾಗಿದ್ದರು. ರಾಜೇಶ್ವರಿ ಅವರ ಮಗ ಪ್ರೀತಮ್ನನ್ನು ಶ್ರವಣಬೆಳಗೊಳದ ವಸತಿ ಶಾಲೆಗೆ ಸೇರಿಸಲು ಕುಟುಂಬ ಇಂದು ಬೆಳಿಗ್ಗೆ ಬೆಂಗಳೂರಿನಿಂದ ಕಾರಿನಲ್ಲಿ ಪ್ರಯಾಣ ಬೆಳೆಸಿತ್ತು.
ಉರ್ಕೆಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಾಗುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಜಯಮಾಲಾ ಹಾಗೂ ರಾಜೇಶ್ವರಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಕಾರು ಚಾಲಕ ಮಾರುತಿ ಹಾಗೂ ರಾಜೇಶ್ವರಿ ಅವರ ಪುತ್ರ ಪ್ರೀತಮ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

