ಶಿವಮೊಗ್ಗದಲ್ಲಿ ಲಿಫ್ಟ್‌ನಲ್ಲಿ 1 ಗಂಟೆ ಸಿಲುಕಿದ್ದ 9 ಮಂದಿ ರಕ್ಷಣೆ

ಲಿಫ್ಟ್‌ನಲ್ಲಿ 1 ಗಂಟೆ ಕಾಲ 9 ಮಂದಿ ಲಾಕ್‌ – ಹರಸಾಹಸಪಟ್ಟು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಶಿವಮೊಗ್ಗ:

ಶಿವಮೊಗ್ಗ ನಗರದ ವಿಶಾಲ್ ಮಾರ್ಟ್ ಕಟ್ಟಡದಲ್ಲಿ ಲಿಫ್ಟ್ ತಾಂತ್ರಿಕ ದೋಷದಿಂದ ಏಕಾಏಕಿ ನಿಂತ ಪರಿಣಾಮ 9 ಮಂದಿ ಒಂದು ಗಂಟೆಗೂ ಹೆಚ್ಚು ಕಾಲ ಒಳಗೆ ಸಿಲುಕಿಕೊಂಡ ಘಟನೆ ನಡೆದಿದೆ.

ಲಿಫ್ಟ್‌ನಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ಲಿಫ್ಟ್ ಮೊದಲ ಮಹಡಿಯಲ್ಲಿ ಹಠಾತ್ ನಿಂತಿದ್ದು, ಅದರೊಳಗೆ ಭರತ್ (37), ಅನುಷಾ (35), ಅನೀಸ್ ಫಾತಿಮಾ (44), ಮುಸರತ್ (39), ಸೂಬಿಯಾ (31), ಮಿಜ್ಜಾ (09), ಬಿಲಾಲ್ (06), ಪ್ರಶಾಂತ್ (28) ಹಾಗೂ ಪ್ರವೀಣ್ ಕುಮಾರ್ (47) ಸಿಲುಕಿಕೊಂಡಿದ್ದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಲಿಫ್ಟ್ ಒಳಗೆ ಸಿಲುಕಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಆತಂಕಕ್ಕೆ ಒಳಗಾಗಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಸಾಕಷ್ಟು ಪ್ರಯತ್ನದ ಬಳಿಕ ಲಿಫ್ಟ್ ಬಾಗಿಲು ತೆರೆಯುವ ಮೂಲಕ ಎಲ್ಲರನ್ನು ಸುರಕ್ಷಿತವಾಗಿ ಹೊರತೆಗೆದರು. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಈ ಘಟನೆ ಬಳಿಕ ಕಟ್ಟಡದ ಲಿಫ್ಟ್ ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ.

Leave a Reply

Your email address will not be published. Required fields are marked *