ಬಿರುಗಾಳಿ ಮಳೆಗೆ ಎಕರೆಗಟ್ಟಲೆ ಬಾಳೆ ಬೆಳೆ ನಾಶ – ಪರಿಹಾರಕ್ಕೆ ರೈತರ ಒತ್ತಾಯ

ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಅಕಾಲಿಕ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರಕಲಗೂಡು ತಾಲೂಕಿನ ಬಸವನಹಳ್ಳಿಕೊಪ್ಪಲು ಗ್ರಾಮದಲ್ಲಿ ಸಾವಿರಾರು ಬಾಳೆ ಗಿಡಗಳು ನೆಲಕಚ್ಚಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ.

ಲೋಕೇಶ್, ಪರಮೇಶ್ ಹಾಗೂ ನಾಗರಾಜ್ ಅವರಿಗೆ ಸೇರಿದ ಬಾಳೆ ತೋಟಗಳು ಸಂಪೂರ್ಣ ಹಾನಿಗೊಳಗಾಗಿವೆ. ಇನ್ನೂ ಒಂದು ತಿಂಗಳಲ್ಲಿ ಕಟಾವು ಮಾಡಬೇಕಿದ್ದ ಬಾಳೆಗೊನೆಗಳು ಮಳೆ ಮತ್ತು ಗಾಳಿಯ ಅಬ್ಬರಕ್ಕೆ ಮುರಿದು ಬಿದ್ದಿವೆ. ಇದರಿಂದ ರೈತರು ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

ಇದೇ ವೇಳೆ ಕೆಲ ರೈತರು ಬೆಳೆದಿದ್ದ ಮೆಕ್ಕೆಜೋಳ ಬೆಳೆ ಕೂಡ ನೆಲಕಚ್ಚಿದೆ. ಅಲ್ಲದೇ ಗ್ರಾಮದಲ್ಲಿನ ಎರಡು ಮನೆಗಳ ಹಂಚುಗಳು ಹಾರಿ ಹೋಗಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಘಟನೆ ನಡೆದ ಬಳಿಕವೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳೆ ಹಾನಿಗೆ ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಅಂದಾಜು ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *