
ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಅಭಿಮಾನಿಗಳಿಗೆ ಇಂದು ಹಬ್ಬದ ಸಂಭ್ರಮ. ಐಪಿಎಲ್ನ ಭಾಗವಾಗಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಈ ಸೀಸನ್ನಲ್ಲಿ ಆರ್ಸಿಬಿ ತವರು ನೆಲದಲ್ಲಿ ಆಡಲಿರುವ ಕೊನೆಯ ಲೀಗ್ ಪಂದ್ಯ ಇದಾಗಿದ್ದು ಅಭಿಮಾನಿಗಳ ಉತ್ಸಾಹ ತಾರಕಕ್ಕೇರಿದೆ. ಈ ಹಿನ್ನೆಲೆ ಕ್ರೀಡಾಂಗಣದ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಹಿಂದಿನ ಪಂದ್ಯಗಳಲ್ಲಿ ಕಂಡುಬಂದ ಅನುಭವದ ಆಧಾರದ ಮೇಲೆ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಮಫ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಸಂಜೆ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಸಾವಿರಾರು ಅಭಿಮಾನಿಗಳು ಚಿನ್ನಸ್ವಾಮಿಯತ್ತ ಹರಿದುಬರುವ ನಿರೀಕ್ಷೆ ಇದೆ.

