ಬಂಗಾಳ ಚುನಾವಣೆಯಲ್ಲಿ ಅಚ್ಚರಿ: ಮನೆ ಕೆಲಸಗಾರ್ತಿಯಿಂದ ಶಾಸಕಿ ಆದ: ಕಲಿತಾ ಮಾಝಿ

ಮನೆಗೆಲಸ ಮಾಡಿಕೊಂಡು ತಿಂಗಳಿಗೆ ₹2,500 ಸಂಪಾದಿಸುತ್ತಿದ್ದ ಮಹಿಳೆ ಈಗ ಬಿಜೆಪಿ ಶಾಸಕಿ!

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಯೊಬ್ಬರ ಬದುಕು ಸಂಪೂರ್ಣವಾಗಿ ಬದಲಾಗಿದೆ. ಮನೆಗೆಲಸ ಮಾಡಿಕೊಂಡು ತಿಂಗಳಿಗೆ ಕೇವಲ ₹2,500 ಸಂಪಾದನೆ ಮಾಡುತ್ತಿದ್ದ ಕಲಿತಾ ಮಾಝಿ ಈಗ ಬಿಜೆಪಿ ಶಾಸಕಿ ಆಗಿ ಆಯ್ಕೆಯಾಗಿದ್ದಾರೆ.

ಕಲಿತಾ ಮಾಝಿ ಅವರು ಪಶ್ಚಿಮ ಬಂಗಾಳದ ಆಸ್ಗ್ರಾಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ತಮ್ಮ ಪ್ರತಿಸ್ಪರ್ಧಿಯನ್ನು 12,535 ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಆರ್ಥಿಕ ಸಂಕಷ್ಟದಿಂದ ಬಾಲ್ಯದಲ್ಲೇ ಶಿಕ್ಷಣವನ್ನು ತ್ಯಜಿಸಿದ್ದ ಕಲಿತಾ ಮಾಝಿ, ಕುಟುಂಬದ ಜೀವನ ಸಾಗಿಸಲು ಹಲವು ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತಿ ಪ್ಲಂಬರ್ ಆಗಿದ್ದು, ಕುಟುಂಬದ ಆದಾಯ ತುಂಬಾ ಕಡಿಮೆಯಾಗಿತ್ತು. ಇವರಿಗೆ ಒಬ್ಬ ಮಗನಿದ್ದು, ಆತ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

ಕಳೆದ ಹತ್ತು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಮಾಝಿ, ಬೂತ್ ಮಟ್ಟದ ಕಾರ್ಯಕರ್ತೆಯಾಗಿ ತಮ್ಮ ರಾಜಕೀಯ ಪಯಣ ಆರಂಭಿಸಿದ್ದರು. 2021ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದರೂ ಸೋಲು ಕಂಡಿದ್ದರು. ಆದರೂ ಬಿಜೆಪಿ ನಾಯಕತ್ವವು ಅವರ ಮೇಲೆ ಮತ್ತೊಮ್ಮೆ ನಂಬಿಕೆ ಇಟ್ಟು 2026ರ ಚುನಾವಣೆಯಲ್ಲೂ ಅವಕಾಶ ನೀಡಿತ್ತು.

ಕೊನೆಗೂ ಕಲಿತಾ ಮಾಝಿ ಗೆಲುವಿನ ನಗೆ ಬೀರಿದ್ದಾರೆ. ಸಾಮಾನ್ಯ ಹಿನ್ನೆಲೆಯಿಂದ ಬಂದ ಮಹಿಳೆ ಇಂದು ಶಾಸಕಿ ಆಗಿರುವುದು ಹಲವರಿಗೆ ಪ್ರೇರಣೆಯಾಗಿದೆ.

ಅವರ ಅಫಿಡವಿಟ್ ಪ್ರಕಾರ, ಕಲಿತಾ ಮಾಝಿಯವರ ಒಟ್ಟು ಆಸ್ತಿ ₹1.61 ಲಕ್ಷವಾಗಿದೆ. ಇದರಲ್ಲಿ ಬ್ಯಾಂಕ್ ಠೇವಣಿ, ನಗದು ಮತ್ತು LIC ಪಾಲಿಸಿಗಳು ಸೇರಿವೆ. ಅವರ ಪತಿಯ ಹೆಸರಿನಲ್ಲಿ ಸುಮಾರು ₹3 ಲಕ್ಷ ಮೌಲ್ಯದ ಮನೆ ಕೂಡ ಇದೆ.

Leave a Reply

Your email address will not be published. Required fields are marked *