ಬೀದರ್‌ನಲ್ಲಿ ಬೀದಿ ನಾಯಿ ದಾಳಿ: 5 ತಿಂಗಳ ಕಂದಮ್ಮ ದುರ್ಮರಣ

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಬೀದಿ ನಾಯಿಯ ದಾಳಿಗೆ 5 ತಿಂಗಳ ಹಸುಗೂಸು ಶಿವಾನಿ ಸಾವನ್ನಪ್ಪಿದ್ದಾಳೆ.

ಸುಧಾ ಮತ್ತು ಸಿದ್ದಪ್ಪ ದಂಪತಿಯ ನಾಲ್ಕನೇ ಹೆಣ್ಣು ಮಗು ಶಿವಾನಿಯಾಗಿದ್ದು, ತಾಯಿ ಮನೆಯ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮಗುವನ್ನು ಮನೆಯ ಪಡಸಾಲೆಯಲ್ಲಿ ಮಲಗಿಸಲಾಗಿತ್ತು. ಇದೇ ವೇಳೆ ಏಕಾಏಕಿ ಮನೆಗೆ ನುಗ್ಗಿದ ಬೀದಿ ನಾಯಿ ಮಗುವಿನ ಮೇಲೆ ದಾಳಿ ನಡೆಸಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

ಘಟನೆ ಬಳಿಕ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕದ ಹುಮ್ನಾಬಾದ್ ಪುರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಾಗೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *