
ಇರಾನ್‌ನಲ್ಲಿ ಅಮೆರಿಕ-ಇಸ್ರೇಲ್ ಅಬ್ಬರ: ರೆಡ್ ಕ್ರೆಸೆಂಟ್ ರಕ್ಷಣಾ ವಾಹನ ಧ್ವಂಸ, ಹನ್ನೆರಡು ನಗರಗಳ ಮೇಲೆ ವಾಯು ದಾಳಿ
ತೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದ್ದು, ಇರಾನ್‌ನ ದಕ್ಷಿಣ ಭಾಗದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಭೀಕರ ವೈಮಾನಿಕ ದಾಳಿ ನಡೆಸಿವೆ. ಈ ದಾಳಿಯಲ್ಲಿ ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಗೆ (Iranian Red Crescent Society) ಸೇರಿದ ರಕ್ಷಣಾ ವಾಹನವೊಂದು ಸಂಪೂರ್ಣವಾಗಿ ನಾಶವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (IRIB) ವರದಿಯ ಪ್ರಕಾರ, ದಕ್ಷಿಣ ಇರಾನ್‌ನ ಸೆಪಿಡಾನ್ ಎಂಬಲ್ಲಿ ಈ ದಾಳಿ ನಡೆದಿದೆ. ಭಾನುವಾರ ಮುಂಜಾನೆ ಸುಮಾರು 5:00 ಗಂಟೆಗೆ ರೆಡ್ ಕ್ರೆಸೆಂಟ್ ತಂಡವು ರಕ್ಷಣಾ ಕಾರ್ಯಾಚರಣೆಗಾಗಿ ತೆರಳುತ್ತಿದ್ದಾಗ ಈ ಗುರಿ ಇರಿಸಿ ದಾಳಿ ಮಾಡಲಾಗಿದೆ. ಮಾನವೀಯ ನೆರವು ನೀಡುವ ವಾಹನದ ಮೇಲಿನ ಈ ದಾಳಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
12 ನಗರಗಳ ಮೇಲೆ ದಾಳಿ: ಕೇವಲ ಸೆಪಿಡಾನ್ ಮಾತ್ರವಲ್ಲದೆ, ಇರಾನ್‌ನಾದ್ಯಂತ ಕನಿಷ್ಠ 12 ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿವೆ ಎಂದು ಅಲ್ ಜಜೀರಾ ವರದಿ ಮಾಡಿದೆ. ರಾಜಧಾನಿ ತೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಸಮೀಪ ಮತ್ತು ಶರೀಫ್ ವಿಶ್ವವಿದ್ಯಾಲಯದ ಹತ್ತಿರವಿರುವ ಗ್ಯಾಸ್ ಸಬ್‌ಸ್ಟೇಷನ್ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ.
ಬಂದರ್ ಅಬ್ಬಾಸ್, ಅಹ್ವಾಜ್, ಶಿರಾಜ್, ಇಸ್ಫಹಾನ್, ಕರಾಜ್ ಮತ್ತು ಪವಿತ್ರ ನಗರವಾದ ಕೋಮ್ ಸೇರಿದಂತೆ ಹಲವು ನಗರಗಳಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಕೋಮ್‌ನಲ್ಲಿ ನಡೆದ ದಾಳಿಯಲ್ಲಿ ಐವರು ಮತ್ತು ಕಾಂಗ್ ನಗರದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 17ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕದನ ವಿರಾಮಕ್ಕೆ ಇರಾನ್ ನಿರಾಕರಣೆ: ಈ ಸಂಘರ್ಷದ ನಡುವೆ, ಏಪ್ರಿಲ್ 4 ರಂದು ಅಮೆರಿಕ ಪ್ರಸ್ತಾವನೆ ಮಾಡಿದ್ದ 48 ಗಂಟೆಗಳ ತಾತ್ಕಾಲಿಕ ಕದನ ವಿರಾಮವನ್ನು ಇರಾನ್ ಸರ್ಕಾರ ತಿರಸ್ಕರಿಸಿದೆ. ಮಧ್ಯಸ್ಥಿಕೆ ರಾಷ್ಟ್ರವೊಂದರ ಮೂಲಕ ಬಂದಿದ್ದ ಈ ಪ್ರಸ್ತಾವನೆಯನ್ನು ಇರಾನ್ ಫಾರ್ಸ್ ಸುದ್ಧಿ ಸಂಸ್ಥೆ “ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಹೇಳುವ ಮೂಲಕ ತಳ್ಳಿಹಾಕಿದೆ.
ಅಮೆರಿಕದ ಫೈಟರ್ ಜೆಟ್ ಪತನ: ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದಂತೆ, ಇರಾನ್ ಭೂಪ್ರದೇಶದ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕದ ಯುದ್ಧ ವಿಮಾನವೊಂದನ್ನು ಇರಾನ್ ಹೊಡೆದುರುಳಿಸಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿಗಳ ಪೈಕಿ ಒಬ್ಬನನ್ನು ಅಮೆರಿಕದ ವಿಶೇಷ ಪಡೆಗಳು ಯಶಸ್ವಿಯಾಗಿ ರಕ್ಷಿಸಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಮ್ಮ ವಾಯುಪಡೆಯ ಅಧಿಕಾರಿ ಸುರಕ್ಷಿತವಾಗಿದ್ದಾರೆ, ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ. ಆದರೆ ಮತ್ತೊಬ್ಬ ಸಿಬ್ಬಂದಿಯ ಪತ್ತೆಗಾಗಿ ಹುಡುಕಾಟ ಮುಂದುವರಿದಿದೆ.
ಇರಾನ್‌ನ ತೈಲ ಕೇಂದ್ರಗಳು ಮತ್ತು ಆಯಕಟ್ಟಿನ ಪ್ರದೇಶಗಳ ಮೇಲೆ ದಾಳಿ ಮಾಡುವ ಮೂಲಕ ಇರಾನ್‌ನ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯನ್ನು ಕುಗ್ಗಿಸಲು ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ.

