ಮದುವೆಗೆ 10 ದಿನ ಬಾಕಿ… ವರ ಸಾವು! ಪ್ರೀವೆಡ್ಡಿಂಗ್ ಪ್ರಯಾಣವೇ ಕೊನೆಯಾಯಿತು

ಹಾಸನ: ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ವರನೊಬ್ಬ ದುರಂತವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಮನು ಎಲ್‌.ಎನ್‌. (29) ಎಂದು ಗುರುತಿಸಲಾಗಿದೆ. ಇವರು ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ನಿವಾಸಿಯಾಗಿದ್ದು, ಮೇ 10ರಂದು ಆಲೂರು ತಾಲ್ಲೂಕಿನ ತೊಗರನಹಳ್ಳಿ ಗ್ರಾಮದ ಕಾಂಚನ ಅವರೊಂದಿಗೆ ವಿವಾಹ ನಿಗದಿಯಾಗಿತ್ತು.

ಇಂದು ಬೆಳಿಗ್ಗೆ ಪ್ರೀವೆಡ್ಡಿಂಗ್ ಶೂಟ್‌ಗಾಗಿ ವಧುವನ್ನು ಕರೆತರಲು ಮನು ತಮ್ಮ ವಿಟಾರಾ ಬ್ರೆಝಾ ಕಾರಿನಲ್ಲಿ ಒಬ್ಬರೇ ತೆರಳಿದ್ದರು. ಸಕಲೇಶಪುರದ ಮೂಗಲಿ ಗ್ರಾಮದ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮನು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಗನ ಮದುವೆ ಸಂಭ್ರಮದಲ್ಲಿ ತೊಡಗಿದ್ದ ಕುಟುಂಬಕ್ಕೆ ಈ ದುಃಖದ ಸುದ್ದಿ ಆಘಾತ ತಂದಿದ್ದು, ಮನೆಮಂದಿಯ ಆಕ್ರಂದನ ಮನಕಲಕುವಂತಾಗಿದೆ. ಮದುವೆ ಸಡಗರದ ಮನೆಯಲ್ಲೀಗ ಶೋಕಮಯ ವಾತಾವರಣ ಆವರಿಸಿದೆ.

ಘಟನಾ ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *