
ಅಮೆರಿಕದಲ್ಲಿ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಆಂಧ್ರಪ್ರದೇಶದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮನಕಲಕುವಂತಿದೆ. ಕರ್ನೂಲ್ ಜಿಲ್ಲೆಯ 26 ವರ್ಷದ ಇರಗನಬೋಯಿನ ಚಂದು, ಚಿಕಾಗೋದ ಡಿಪಾಲ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಹಲವು ವಾರಗಳಿಂದ ಕೆಲಸ ಸಿಗದೆ ಆರ್ಥಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಕುಟುಂಬದ ಸಾಲಬಾಧೆ ಹಾಗೂ ತಂದೆಯ ಆರ್ಥಿಕ ಸಂಕಷ್ಟದಿಂದ ತೀವ್ರವಾಗಿ ಮನನೊಂದಿದ್ದ ಚಂದು, ಅಮೆರಿಕದಲ್ಲಿರುವ ತಮ್ಮ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಚಂದು ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸುಮಾರು 20 ಲಕ್ಷ ರೂ. ವೆಚ್ಚವಾಗಲಿದ್ದು, ಇದನ್ನು ಭರಿಸಲು ಸಾಧ್ಯವಾಗದ ಹಿನ್ನೆಲೆ ಅಮೆರಿಕದಲ್ಲಿರುವ ಭಾರತೀಯ ಸಮುದಾಯ ನಿಧಿ ಸಂಗ್ರಹಣೆಗೆ ಮುಂದಾಗಿದೆ. ಈಗಾಗಲೇ ಸಾವಿರಾರು ಡಾಲರ್ ಸಂಗ್ರಹವಾಗಿದ್ದು, ಕುಟುಂಬದ ಸಾಲ ತೀರಿಸಲು ಸಹ ನೆರವು ನೀಡಲಾಗುತ್ತಿದೆ.
ಈ ಪ್ರಕರಣಕ್ಕೆ ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ಸಂತಾಪ ಸೂಚಿಸಿದ್ದು, ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರ ನೆರವು ಕೋರಿದ್ದಾರೆ. ಮೃತದೇಹವನ್ನು ತ್ವರಿತವಾಗಿ ಭಾರತಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ.
ಚಂದು ತನ್ನ ಕುಟುಂಬದ ಆಶಾಕಿರಣವಾಗಿದ್ದು, ಕಿರಿಯ ಸಹೋದರನಿಗೆ ಬೆಂಬಲವಾಗಿದ್ದರು ಎಂದು ಸಮುದಾಯದವರು ಕಣ್ಣೀರಿಟ್ಟಿದ್ದಾರೆ.

