ಚಿಕ್ಕಬಳ್ಳಾಪುರ ಶಾಕ್: ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿಗಳು

ಚಿಕ್ಕಬಳ್ಳಾಪುರ: ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಕಾಲೇಜು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜು ಬಳಿ ನಡೆದಿದೆ.

ನಂದಿಗಿರಿಧಾಮ ಪೊಲೀಸ್ ಠಾಣೆಯ ಎಎಸ್‌ಐ ಗಂಗರಾಜು ಹಾಗೂ ಕಾನ್ಸ್‌ಟೇಬಲ್ ಭದ್ರತಾ ಕರ್ತವ್ಯದಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿನಿಮಾ ನಟರು ಹಾಗೂ ನಟಿಯರು ಆಗಮಿಸಿದ್ದರಿಂದ ಪೊಲೀಸರು ಗೇಟ್ ಬಳಿ ಭದ್ರತೆಗಾಗಿ ನಿಯೋಜಿತರಾಗಿದ್ದರು.

ಈ ವೇಳೆ ಕೆಲವು ವಿದ್ಯಾರ್ಥಿಗಳು ಸೈಲೆನ್ಸರ್ ಬದಲಾಯಿಸಿದ ಬೈಕ್‌ಗಳಲ್ಲಿ ಕರ್ಕಶ ಶಬ್ದ ಮಾಡುತ್ತಾ ಓಡಾಡುತ್ತಿದ್ದರೆಂದು ಹೇಳಲಾಗಿದೆ. ಇದನ್ನು ಗಮನಿಸಿದ ಎಎಸ್‌ಐ ಗಂಗರಾಜು ಶಬ್ದ ಮಾಡದೆ ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ.

ಆದರೆ ಒಬ್ಬ ವಿದ್ಯಾರ್ಥಿ ಪೊಲೀಸರ ಮಾತನ್ನು ನಿರ್ಲಕ್ಷಿಸಿ ಮತ್ತೆ ಶಬ್ದ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದರಿಂದ ಕೆರಳಿದ ಎಎಸ್‌ಐ ಲಾಠಿ ಬೀಸಿದ್ದು, ವಿದ್ಯಾರ್ಥಿಗೆ ಗಾಯವಾಗಿದೆ ಎನ್ನಲಾಗಿದೆ.

ಇದರಿಂದ ಕೋಪಗೊಂಡ ವಿದ್ಯಾರ್ಥಿಗಳ ಗುಂಪು ಪೊಲೀಸರ ಮೇಲೆ ದಾಳಿ ನಡೆಸಿದೆ. ಎಎಸ್‌ಐ ಗಂಗರಾಜು ಹಾಗೂ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದ್ದು, ತಡೆಯಲು ಪ್ರಯತ್ನಿಸಿದ ಮತ್ತೊಬ್ಬ ಸಿಬ್ಬಂದಿಗೂ ನೂಕಾಟ ನಡೆದಿದೆ.

ಘಟನೆ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ವಿದ್ಯಾರ್ಥಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *