
ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ಸಮೀಪದ ಕಾವಲಹೊಸಹಳ್ಳಿಯಲ್ಲಿ ಹೆಂಡತಿ ಮತ್ತು ಮಕ್ಕಳನ್ನು ಮರಳಿ ಕರೆತರಲು ಬಂದಿದ್ದ ಅಳಿಯ ನವೀನ್ (36) ನಿಗೂಢವಾಗಿ ಸಾವನ್ನಪ್ಪಿದ ಘಟನೆ ಇದೀಗ ಕೊಲೆ ಪ್ರಕರಣವಾಗಿ ತಿರುಗಿದೆ.
ಮೂಲತಃ ತಮಿಳುನಾಡು ನಿವಾಸಿಯಾದ ನವೀನ್, ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪತ್ನಿ ಸುಚಿತ್ರಾ ಮಕ್ಕಳೊಂದಿಗೆ ತವರು ಮನೆಗೆ ಬಂದಿದ್ದ ಕಾರಣ ಅವರನ್ನು ಮನೆಗೆ ಮರಳಿ ಕರೆದೊಯ್ಯಲು ಆಗಮಿಸಿದ್ದರು. ಆದರೆ, ಈ ವೇಳೆ ಗಂಭೀರ ಘಟನೆ ನಡೆದಿದೆ.
ಘಟನೆಯ ದಿನ ನವೀನ್ ಮದ್ಯಪಾನ ಮಾಡಿ ಪತ್ನಿಯ ಮನೆ ಬಳಿ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಬೆಂಕಿ ಹಚ್ಚಿಕೊಂಡಿರುವ ದೃಶ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವೀನ್ ಸಾವನ್ನಪ್ಪುವ ಮುನ್ನ ನೀಡಿದ ಹೇಳಿಕೆಯಲ್ಲಿ, “ನನ್ನ ಮಾವ ಸಂಪಂಗಿ, ಅತ್ತೆ ಪಚ್ಚಮ್ಮ ಮತ್ತು ಬಾಮೈದ ಮುನೇಶ್ ನನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ” ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹೇಳಿಕೆಯ ಆಧಾರದ ಮೇಲೆ ಆನೇಕಲ್ ಪೊಲೀಸರು ಪ್ರಕರಣವನ್ನು ಕೊಲೆ ಎಂದು ದಾಖಲಿಸಿಕೊಂಡಿದ್ದಾರೆ. ಮಾವ ಸಂಪಂಗಿ ಮತ್ತು ಬಾಮೈದ ಮುನೇಶ್ ಅವರನ್ನು ಬಂಧಿಸಲಾಗಿದೆ.
ಅತ್ತೆ ಪಚ್ಚಮ್ಮ ಮತ್ತು ಪತ್ನಿ ಸುಚಿತ್ರಾ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಘಟನೆಯ ನಿಜಾಂಶ ತಿಳಿಯಲು ಪೊಲೀಸರು ಮೊಬೈಲ್ ವಿಡಿಯೋ ಮತ್ತು ಡೆತ್ ಡಿಕ್ಲರೇಷನ್ ಎರಡನ್ನೂ ಪರಿಶೀಲಿಸುತ್ತಿದ್ದು, ತನಿಖೆ ಚುರುಕುಗೊಂಡಿದೆ.

