
ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಹೋಟೆಲ್ನಲ್ಲಿ ಇದ್ದ ಎರಡು ಗ್ಯಾಸ್ ಸಿಲಿಂಡರ್ಗಳು ಏಕಾಏಕಿ ಸ್ಫೋಟಗೊಂಡು ಹೋಟೆಲ್ ಹೊತ್ತಿ ಉರಿದ ಘಟನೆ ನಡೆದಿದೆ.
ಈ ಹೋಟೆಲ್ ತೆಕ್ಕಲಕೋಟೆಯ ನಿವಾಸಿ ಈರಣ್ಣ ಅವರಿಗೆ ಸೇರಿದ್ದಾಗಿದೆ. ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಅವಘಡ ಸಂಭವಿಸಿದ್ದು, ಆಗ ಹೋಟೆಲ್ನಲ್ಲಿ ಈರಣ್ಣನ ಕುಟುಂಬದ 9 ಮಂದಿ ಮಲಗಿದ್ದರು ಎಂದು ತಿಳಿದು ಬಂದಿದೆ.
ಸಿಲಿಂಡರ್ ಸ್ಫೋಟದ ಪರಿಣಾಮವಾಗಿ 10 ವರ್ಷದ ಶ್ರೀನಿವಾಸ್ ಎಂಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಬಾಲಕನನ್ನು ತಕ್ಷಣವೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಉಳಿದ ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸ್ಫೋಟದಿಂದ ಹೋಟೆಲ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಆಸ್ತಿಗೆ ಭಾರೀ ನಷ್ಟ ಸಂಭವಿಸಿದೆ.
ಸಿಲಿಂಡರ್ ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

