ತಮಿಳುನಾಡಲ್ಲಿ ಸರ್ಕಾರ ರಚಿಸಲು ವಿಜಯ್‌ಗೆ ಕಾಂಗ್ರೆಸ್ ಬೆಂಬಲ? ಕೆ.ಸಿ.ವೇಣುಗೋಪಾಲ್ ಹೇಳಿದ್ದೇನು

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ಬೆಳವಣಿಗೆಯಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರು ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷದ ಬೆಂಬಲ ಕೋರಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ಕುರಿತು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಕಾಂಗ್ರೆಸ್‌ನ ತಮಿಳುನಾಡು ಘಟಕವು ನಾಳೆ ಬೆಳಗ್ಗೆ ಚೆನ್ನೈನಲ್ಲಿ ಸಭೆ ಸೇರಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಜಾತ್ಯತೀತ ಸರ್ಕಾರ ಸ್ಥಾಪನೆಗೆ ಜನಾದೇಶ ಸ್ಪಷ್ಟವಾಗಿದೆ. ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಬಯಸುವುದಿಲ್ಲ ಎಂಬ ಸಂದೇಶ ಜನರಿಂದ ಬಂದಿದೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಪಕ್ಷದ ಕೇಂದ್ರ ನಾಯಕತ್ವವು ರಾಜ್ಯ ಘಟಕಕ್ಕೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಸ್ವಾಯತ್ತತೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಇತರ ಪಕ್ಷಗಳು ಸಹ ಹೊಸ ಸರ್ಕಾರದ ಭಾಗವಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಅವರ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ವಿಜಯ್ ಅವರು ಸರ್ಕಾರ ರಚನೆಗೆ ಅಧಿಕೃತವಾಗಿ ಹಕ್ಕು ಮಂಡಿಸಿದ ಬಳಿಕವೇ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಮುಂದುವರಿಯಲಿದೆ.

ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ಕೂಡ ವಿಜಯ್ ಅವರು ಕಾಂಗ್ರೆಸ್ ಮುಖ್ಯಸ್ಥರಿಗೆ ಬೆಂಬಲ ಕೋರಿ ಪತ್ರ ಬರೆದಿರುವುದನ್ನು ದೃಢಪಡಿಸಿದ್ದಾರೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳು ಅಗತ್ಯವಿದೆ. ಈ ಬಾರಿ ಟಿವಿಕೆ ಪಕ್ಷ 108 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸ್ಪಷ್ಟ ಬಹುಮತ ಸಿಗದ ಹಿನ್ನೆಲೆ ರಾಜ್ಯ ರಾಜಕೀಯ ಮೈತ್ರಿ ಮಾತುಕತೆಗಳತ್ತ ಮುಖ ಮಾಡಿದೆ.

Leave a Reply

Your email address will not be published. Required fields are marked *