ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ರೆ ವಜಾಗೊಳಿಸಿ: ಹಿಮಂತ ಶರ್ಮಾ ಕಿಡಿ

ದಿಸ್ಪುರ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡದಿದ್ದರೆ ಅವರನ್ನು ವಜಾಗೊಳಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಂಗಾಳ ಜನರು ಮಮತಾ ಬ್ಯಾನರ್ಜಿಯನ್ನು ಬಹಳ ವರ್ಷಗಳಿಂದ ಸಹಿಸಿಕೊಂಡಿದ್ದಾರೆ. ಈಗ ಜನರು ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡಿದ್ದಾರೆ. ಹೀಗಾಗಿ ಅವರು ಅಧಿಕಾರ ತ್ಯಜಿಸಬೇಕು ಎಂದು ಶರ್ಮಾ ಆಗ್ರಹಿಸಿದ್ದಾರೆ.

“ಚುನಾವಣಾ ಫಲಿತಾಂಶ ಬಂದ ಬಳಿಕವೂ ‘ನಾನು ರಾಜೀನಾಮೆ ನೀಡುವುದಿಲ್ಲ’ ಎಂದು ಹೇಳುವುದು ಸರಿಯಲ್ಲ. ದೇಶವು ಯಾರೊಬ್ಬರ ಇಚ್ಛೆಯಂತೆ ನಡೆಯುವುದಿಲ್ಲ. ರಾಜ್ಯಪಾಲರು ನಿರ್ದಿಷ್ಟ ಅವಧಿವರೆಗೆ ಕಾಯಬಹುದು. ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, “ನಿಮ್ಮಿಂದ 100 ಸ್ಥಾನಗಳನ್ನು ಕಸಿದುಕೊಳ್ಳಲಾಗಿದೆ ಎಂದು ನೀವು ಹೇಳುತ್ತಿದ್ದೀರಾ? ಹಾಗಾದರೆ ಕಾಂಗ್ರೆಸ್ ಗೆದ್ದ 19 ಸ್ಥಾನಗಳನ್ನು ನನ್ನಿಂದ ಕಸಿದುಕೊಳ್ಳಲಾಗಿದೆ ಎಂದು ನಾನು ಹೇಳಬಹುದು. ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಹೀಗೆ ಕೆಲಸ ಮಾಡುವುದಿಲ್ಲ” ಎಂದು ಶರ್ಮಾ ಟೀಕಿಸಿದ್ದಾರೆ.

ಬಂಗಾಳ ಗಡಿಯಲ್ಲಿ ಬೇಲಿ ಹಾಕಲು ಅವಕಾಶ ನೀಡುವುದಿಲ್ಲ. ಈಗ ಚುನಾವಣಾ ಫಲಿತಾಂಶದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ ಎಂದು ಅವರು ಮಮತಾ ವಿರುದ್ಧ ವಾಗ್ದಾಳಿ ನಡೆಸಿದರು.

ಸತತ ಮೂರು ಅವಧಿ ಆಡಳಿತ ನಡೆಸಿದ್ದ ಟಿಎಂಸಿ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಬಿಜೆಪಿ ರಾಜ್ಯದಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದೆ.

ಇನ್ನೊಂದೆಡೆ, “ನಾನು ಸೋತಿಲ್ಲ. ಆದ್ದರಿಂದ ರಾಜಭವನಕ್ಕೆ ಹೋಗುವುದಿಲ್ಲ. ನಾನು ರಾಜೀನಾಮೆ ನೀಡುವುದಿಲ್ಲ” ಎಂದು ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *