ಎಣ್ಣೆ ಪ್ರಿಯರಿಗೆ ಬಿಗ್ ಶಾಕ್: ಆಲ್ಕೋಹಾಲ್ ಆಧಾರಿತ ತೆರಿಗೆ – ಮದ್ಯದ ಬೆಲೆ 20% ಏರಿಕೆ ಸಾಧ್ಯತೆ

ಬೆಂಗಳೂರು, ಏಪ್ರಿಲ್ 19: ರಾಜ್ಯದ ಮದ್ಯಪ್ರಿಯರಿಗೆ ಶಾಕ್ ನೀಡುವ ಬೆಳವಣಿಗೆಯಾಗಿ, ಕರ್ನಾಟಕ ಸರ್ಕಾರ ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಈ ಸಂಬಂಧ ಕರಡು ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದ್ದು, ಇದು ಜಾರಿಯಾದರೆ ಮದ್ಯದ ಬೆಲೆಗಳಲ್ಲಿ ಗಣನೀಯ ಏರಿಕೆ ಆಗುವ ಸಾಧ್ಯತೆ ಇದೆ.

ಹೊಸ ನಿಯಮದ ಪ್ರಕಾರ, ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣ (Alcohol In Beverage – AIB) ಹೆಚ್ಚಾದಷ್ಟೂ ಅದರ ಮೇಲೆ ವಿಧಿಸುವ ತೆರಿಗೆಯೂ ಹೆಚ್ಚಾಗಲಿದೆ. ಇದರ ಪರಿಣಾಮವಾಗಿ ವಿಸ್ಕಿ, ರಮ್, ಜಿನ್, ಬ್ರಾಂಡಿ ಸೇರಿದಂತೆ ಸಾಮಾನ್ಯವಾಗಿ ಜನರು ಬಳಸುವ ಮದ್ಯಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಕನಿಷ್ಠ ಶೇ.20ರಷ್ಟು ಹೆಚ್ಚಾಗಬಹುದು.

ಪ್ರಸ್ತುತ ರಾಜ್ಯದಲ್ಲಿ ಮದ್ಯವನ್ನು MRP ಆಧಾರದ ಮೇಲೆ ವಿವಿಧ ಸ್ಲ್ಯಾಬ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಹೊಸ ವ್ಯವಸ್ಥೆ ಜಾರಿಗೆ ಬಂದರೆ, ಕಡಿಮೆ ಆದಾಯ ವರ್ಗದವರು ಹೆಚ್ಚು ಬಳಸುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯವೇ ಹೆಚ್ಚು ದುಬಾರಿ ಆಗಲಿದೆ. ಈ ವಿಭಾಗದ ಮದ್ಯಗಳಲ್ಲಿ ಸರಾಸರಿ ಆಲ್ಕೋಹಾಲ್ ಪ್ರಮಾಣ ಶೇ.42.8ರಷ್ಟಿದೆ.

ಈ ನಾಲ್ಕು ಸ್ಲ್ಯಾಬ್‌ಗಳು ರಾಜ್ಯದ ಒಟ್ಟು ಎಕ್ಸೈಸ್ ಆದಾಯದಲ್ಲಿ ಶೇ.80ರಷ್ಟು ಪಾಲು ಹೊಂದಿವೆ. ಕಳೆದ ವರ್ಷ 180 ಮಿಲಿ ಮದ್ಯದ ಬೆಲೆ 80ರಿಂದ 95 ರೂಪಾಯಿಗೆ ಏರಿಕೆಯಾಗಿತ್ತು. ಹೊಸ ತೆರಿಗೆ ವ್ಯವಸ್ಥೆ ಜಾರಿಯಾದರೆ ಇದೇ ಮದ್ಯದ ಬೆಲೆ 105ರಿಂದ 110 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.

ಸರ್ಕಾರವು ಸುಮಾರು ಆರು ದಶಕಗಳ ಹಳೆಯ ಮದ್ಯ ತೆರಿಗೆ ನೀತಿಯಲ್ಲಿ ತಿದ್ದುಪಡಿ ಮಾಡಲು ಮುಂದಾಗಿದ್ದು, ಈ ಕ್ರಮ ಜಾರಿಯಾದಲ್ಲಿ ಆಲ್ಕೋಹಾಲ್ ಇನ್ ಬೇವರೇಜ್ (AIB) ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ.

ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಪರಸಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸಾಮಾನ್ಯ ಜನರು ಬಳಸುವ ಮದ್ಯದ ಬೆಲೆ ಏರಿಕೆಯಿಂದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಅಂತಿಮ ಅಧಿಸೂಚನೆ ಹೊರಬರುವ ಮೊದಲು ಸರ್ಕಾರ ನಮ್ಮ ಸಲಹೆಗಳನ್ನು ಪರಿಗಣಿಸುತ್ತದೆ ಎಂಬ ವಿಶ್ವಾಸವಿದೆ,” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *