ಗುಡ್ಡಕುಸಿದ ಸ್ಥಳದಲ್ಲೇ ಮಾಲೀಕನಿಗಾಗಿ ಕಾದುಕುಳಿತ ಸಾಕು ನಾಯಿ!

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಗುಡ್ಡಕುಸಿತ ದುರಂತ ನಡೆದು ಇಂದಿಗೆ 14 ನೇ ದಿನಗಳು ಕಳೆದಿದ್ದು, ಗುಡ್ಡಕುಸಿದ ಸ್ಥಳದಲ್ಲೇ ಟೀ ಹೊಟೇಲ್ ಮಾಲೀಕ ಲಕ್ಷ್ಮಣ ನಾಯ್ಕನಿಗಾಗಿ ಸಾಕು ನಾಯಿ ಕಾದುಕುಳಿತಿದೆ. ಇಂದಿಗೆ ಲಕ್ಷ್ಮಣ ಸಾವನ್ನಪ್ಪಿ 14 ದಿನ ಕಳೆದ್ರೂ ಕೂಡ ಹೊಟೇಲ್ ಇದ್ದ ಸ್ಥಳದಿಂದ ಕದಲದೇ ಮೂಕ ರೋಧನೆ ತೋರುತ್ತಿದೆ. ಭಾರೀ ಮಳೆಯಿಂದ ಗುಡ್ಡಕುಸಿತದಲ್ಲಿ ಗುರುತೇ ಸಿಗದಂತೆ ಹೊಟೇಲ್ ಪ್ರದೇಶ ನಾಶವಾಗಿದೆ.
ಅಲ್ಲದೇ ಕಾಣೆಯಾದ 11 ಮಂದಿ ಪೈಕಿ ಇದುವರೆಗೆ 8 ಮಂದಿಯ ಶವ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಇನ್ನೂ ಮೂವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಸದ್ಯ ಹೆದ್ದಾರಿ ಮೇಲೆ ಬಿದ್ದಿದ್ದ ಮಣ್ಣು ತೆರವು ಕಾರ್ಯ ಬಹುತೇಕ ಪೂರ್ಣಗೊಳ್ಳುತ್ತಿದೆ. ಗುಡ್ಡಕುಸಿದ ಸ್ಥಳದಲ್ಲಿ ಜಿಲ್ಲಾಡಳಿತ ಸುರಕ್ಷತಾ ಕ್ರಮ ಕೈಗೊಳ್ಳಲು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ. ಒಂದು ಬದಿ ಹೆದ್ದಾರಿಯಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಂಡಿದೆ. ಮಣ್ಣು ಕುಸಿದರೂ ಹೆದ್ದಾರಿ ಮೇಲೆ ಬೀಳದಂತೆ ತಡೆಯಲು ಡಿವೈಡರ್ ಅಳವಡಿಕೆ ಮಾಡಿದ್ದು, ಕಳೆದ 14 ದಿನಗಳಿಂದ ಬಂದ್ ಆಗಿರುವ ರಾಷ್ಟ್ರೀಯ ಹೆದ್ದಾರಿ 66ರ ಸಂಚಾರ ಪುನರಾರಂಭಿಸಲು ಜಿಲ್ಲಾಡಳಿತದ ಸಿದ್ಧತೆ ಮಾಡಿಕೊಳ್ಳುತ್ತಿದೆ.
What's Your Reaction?






