ಉದ್ಯಮ ಸ್ಥಾಪಿಸಲು ಭೂಮಿ ಬೇಕು, ಆದರೆ ಉದ್ಯೋಗ ಕೊಡಲು ಕನ್ನಡಿಗರು ಬೇಡ! (ಟೈಟಲ್ )

ನಮ್ಮ ರಾಜ್ಯ ಸರ್ಕಾರ ಜಾರಿಗೆ ತರೋಕೆ ಹೊರಟ ಒಂದು ಮಸೂದೆ ಇಡೀ ದೇಶದಾದ್ಯಂತ ಚರ್ಚಗೆ ಗ್ರಾಸವಾಗಿದೆ. ಉದ್ಯಮ ವಲಯ, ರಾಜಕೀಯ ಅಷ್ಟೇ ಅಲ್ಲ ಜನಸಾಮಾನ್ಯರು ಸಹ ಈ ಮಸೂದೆ ಬಗ್ಗೆ ಪರ-ವಿರೋಧದ ಚರ್ಚೆಯಲ್ಲಿ ತೊಡಗಿದ್ದಾರೆ.
ಇವತ್ತು ನಮ್ಮ ಕರ್ನಾಟಕ ಅದರಲ್ಲೂ ನಮ್ಮ ನಾಡಿನ ರಾಜಧಾನಿ ಬೆಂಗಳೂರು ನಗರ ಜಾಗತಿಕವಾಗಿ ತನ್ನದೇ ಆದ ವರ್ಚಸ್ಸನ್ನು ಬೆಳೆಸಿಕೊಂಡಿದೆ. ಬೇರೆ ಬೇರೆ ರಾಜ್ಯಗಳಿಂದ ವಲಸೆ ಬರುವ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ಅವರ ಬದುಕು ಹಸನಾಗಿಸಿದೆ. ಒಂದು ಕಾಲದಲ್ಲಿ ಗಾರ್ಡನ್ ಸಿಟಿ ಅಂತಲೇ ಖ್ಯಾತವಾಗಿದ್ದ ಬೆಂದಕಾಳೂರು ಇವತ್ತು ಭಾರತದ ಐಟಿ-ಬಿಟಿ ರಾಜಧಾನಿ. ಸಿಲಿಕಾನ್ ವ್ಯಾಲಿ ಎಂದೇ ವಿಶ್ವದಾದ್ಯಂತ ಹೆಸರು ಪಡೆದಿದೆ. ಇನ್ನು ನಮ್ಮ ರಾಜ್ಯದ ಎಲ್ಲ ಭಾಗಗಳಲ್ಲೂ ಕೂಡ ಪ್ರತಿಷ್ಠಿತ ಕಂಪೆನಿಗಳು, ಕಾರ್ಖಾನೆಗಳು, ಉದ್ಯಮಗಳು ಸ್ಥಾಪಿಸಲ್ಪಟ್ಟಿವೆ. ಹಾಗೂ ಅತ್ಯಂತ ಯಶಸ್ವಿಯಾಗಿ, ಲಾಭದಾಯಕವಾಗಿ ನಡೆಯುತ್ತಿವೆ.
ನಿಮಗೆ ಗೊತ್ತಾ? ರಾಜ್ಯದಾದ್ಯಂತ ಇರುವ ಅದೆಷ್ಟೋ ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗ ಉದ್ಯೋಗಿಗಳ ಸಂಖ್ಯೆ ತೀರ ಕಮ್ಮಿ. ಎಲ್ಲಿ ನೋಡಿದರಲ್ಲಿ ಹೊರ ರಾಜ್ಯದವರದೇ ದರ್ಬಾರ್. ಹಾಗಾದ್ರೆ ಖಾಸಗಿ ಕಂಪೆನಿಗಳು ಕನ್ನಡಿಗರನ್ನು ಕಡೆಗಣಿಸ್ತಿವೆಯಾ? ಅಥವಾ ನಮ್ಮಲ್ಲಿ ಕಂಪನಿಗಳಿಗೆ ಬೇಕಾದ ನಿಪುಣ ಕೆಲಸಗಾರರು ಇಲ್ವಾ?
ಇಂತಿಪ್ಪ, ರಾಜ್ಯದ ತುಂಬ ಇರುವ ಅದೆಷ್ಟೋ ಕಂಪನಿಗಳು ಉದ್ಯೋಗ ನೀಡುವಾಗ ಸ್ಥಳೀಯರನ್ನು ಕಡೆಗಣಿಸುತ್ತಿವೆ ಅನ್ನೋ ಕೂಗು ಇಂದು ನಿನ್ನೆಯದಲ್ಲ. ಅದೆಷ್ಟೋ ಕಂಪೆನಿಗಳು ಬಹಿರಂಗವಾಗಿ ಉದ್ಯೋಗ ಖಾಲಿ, ಇದೆ ನಾರ್ಥ್ ಇಂಡಿಯಾದವರಿಗೆ ಮಾತ್ರ ಅವಕಾಶ ಅನ್ನೋ ಜಾಹೀರಾತುಗಳನ್ನು ನೀಡುತ್ತಿರೋದು ಹೊಸದಲ್ಲ.
ಇವತ್ತು ಕರ್ನಾಟಕದಲ್ಲಿ ಇಂಜಿನಿಯರಿಂಗ್, ಡಿಪ್ಲೋಮಾ, ಐಟಿಐ ಸೇರಿದಂತೆ ವೃತ್ತಿ ಕೌಶಲ್ಯಗಳನ್ನು ಕಲಿಸುವ ನೂರಾರು ಸರ್ಕಾರಿ, ಖಾಸಗಿ ಸಂಸ್ಥೆಗಳಿವೆ. ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮಪದವಿ ಉತ್ತೀರ್ಣರಾಗಿ ಹೊರ ಬರ್ತಿದಾರೆ. ಇಷ್ಟೆಲ್ಲ skilled man power ಕರ್ನಾಟಕ ಒದಗಿಸುತ್ತಿದ್ದರೂ ಖಾಸಗಿ ಕಂಪೆನಿಗಳು ತಾರತಮ್ಯ ನೀತಿ ಅನುಸರಿಸುತ್ತಿವೆ. ಈ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿವೆ. ಹೀಗೆ ಕನ್ನಡಿಗರ ಕೆಲಸ ಕಿತ್ತುಕೊಂಡು ಇಲ್ಲಿ ದುಡಿಯೋಕೆ ಬಂದು ವರ್ಷಗಟ್ಟಲೇ ಬದುಕುವ ಹೊರಗಿನವರು ಹೇಳೋದು ಒಂದೇ ಮಾತು ಕನ್ನಡ್ ನಹೀ ಆತಾ, ಹಿಂದಿ ಮೇ ಬಾತ್ ಕರೋ!!
ಉದ್ಯೋಗದ ವಿಷಯದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಈ ತಾರತಮ್ಯವನ್ನು ಸರಿಪಡಿಸೋಕೆ ಅಂತನೇ ರಾಜ್ಯ ಸರ್ಕಾರ ಹೊಸ ಮಸೂದೆಯೊಂದನ್ನು ಜಾರಿಗೆ ತರಲು ಹೊರಟಿತ್ತು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಖಾಸಗಿ ವಲಯಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡುವ ಕಾನೂನೊಂದನ್ನು ಜಾರಿಗೆ ತರಲು ಮುಂದಾಗಿತ್ತು. ಈ ಮಸೂದೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆಯೂ ಸಿಕ್ಕಿತ್ತು. ಇನ್ನೇನು ಈ ಮಸೂದೆ ವಿಧಾನ ಮಂಡಲದಲ್ಲಿ ಅಂಗೀಕಾರವಾಗಿ ಜಾರಿಗೆ ಬಂತು ಅನ್ನೋಷ್ಟರಲ್ಲಿ, ಶುರುವಾಯ್ತು ದೊಡ್ಡ ದೊಡ್ಡ ಉದ್ಯಮಿಗಳ ವಿರೋಧದ ನಕರಾ.
ಇವತ್ತು ರಾಜ್ಯದಲ್ಲಿರುವ ಅದೆಷ್ಟೋ ಕಂಪೆನಿಗಳಿಗೆ ರಾಜ್ಯ ಸರ್ಕಾರಗಳು ಹಲವಾರು ಸವಲತ್ತುಗಳನ್ನು ಪ್ರೋತ್ಸಾಹದ ಹೆಸರಲ್ಲಿ ನೀಡ್ತಿವೆ. ವಿದ್ಯುತ್ ನಲ್ಲಿ ಸಬ್ಸಿಡಿ, ತೆರಿಗೆಯಲ್ಲಿ ಸಬ್ಸಿಡಿ ಹೀಗೆ ಹತ್ತು ಹಲವು ವಿನಾಯಿತಿ, ಸವಲತ್ತುಗಳನ್ನು ನೀಡ್ತಿವೆ. ಅದರಂತೆ ಖಾಸಗಿ ಕಂಪೆನಿಗಳು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಲಿ ಅನ್ನೋದು ಸರ್ಕಾರದ ಉದ್ದೇಶ. ಇದರಿಂದ ಸ್ಥಳೀಯರಿಗೆ ಉದ್ಯೋಗವೂ ದೊರಕುತ್ತದೆ, ನಿರುದ್ಯೋಗ ಸಮಸ್ಯೆಯೂ ಕಡಿಮೆ ಆಗುತ್ತದೆ, ಅಲ್ಲದೇ ಹೊರಗಿನಿಂದ ಬಂದವರು ಕನ್ನಡ ಭಾಷೆಯನ್ನು ಕಲಿಯುವುದು ಅನಿವಾರ್ಯವಾಗುತ್ತದೆ. ಆದರೆ ಖಾಸಗೀ ವಲಯದ ಬಹುತೇಕ ಕಂಪೆನಿಗಳಿಗೆ ಇದು ಒಪ್ಪಿಗೆಯಿಲ್ಲ. ಇದು ಪ್ರಜಾಪ್ರಭುತ್ವ ದೇಶ, ನಮಗೆ ಬೇಕಾದವರಿಗೆ ಉದ್ಯೋಗ ನೀಡುತ್ತೇವೆ ಅನ್ನೋದು ಅವರ ವಾದ.
ಈ ನಡುವೆ ಖಾಸಗಿ ಕಂಪೆನಿಗಳ ಈ ನೀತಿಯ ವಿರುದ್ಧ ಕನ್ನಡ ಸಂಘಟನೆಗಳು ಸಿಟ್ಟಾಗಿವೆ. ಉದ್ಯಮಿಗಳ ಒತ್ತಡಕ್ಕೆ ಮಣಿದು ಬಿಲ್ ವಾಪಸ್ ಪಡೆಯಕೂಡದು ಎಂದು ಸಾಮಾಜಿಕ ಜಾಲತಾಣಗಳಲ್ಲಿ, ಹಾಗೂ ಸಾರ್ವಜನಿಕವಾಗಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ.
ಇಷ್ಟೆಲ್ಲ ಪರ ವಿರೋಧದ ಚರ್ಚೆಗೆ ಗ್ರಾಸವಾಗಿರುವ ಈ ಉದ್ಯೋಗ ಮೀಸಲಾತಿ ಜಟಾಪಟಿ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.
ಇದೇ ತರಹ ನಿಖರ ವಿಶ್ಲೇಷಣೆಯ ಸುದ್ದಿಗಳಿಗಾಗಿ ನಮ್ಮ ಫರ್ಸ್ಟ್ ವೇವ್ ನ್ಯೂಸ್ ಕನ್ನಡ ಚಾನಲ್ ವೀಕ್ಷಿಸಿ. ನಮ್ಮ ಚಾನಲ್ ನ್ನು ಸಬ್ಸ್ಕ್ರೈಬ್ ಮಾಡಿ, ಲೈಕ್ ಶೇರ್ ಮಾಡಿ ಬೆಂಬಲಿಸಿ. ನಮಸ್ಕಾರ.
What's Your Reaction?






