
ಬೆಂಗಳೂರು: ರಾಜ್ಯದ ಶಾಲಾ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಲು ಮಹತ್ವದ ಹೆಜ್ಜೆಯೊಂದನ್ನು ಶಿಕ್ಷಣ ಇಲಾಖೆ ಇಟ್ಟಿದೆ. ಇನ್ನುಮುಂದೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿದೆ.
ಪ್ರಾರ್ಥನೆ ಮುಗಿದ ತಕ್ಷಣ ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ವಿದ್ಯಾರ್ಥಿಗಳಿಗೆ ನ್ಯೂಸ್ ಪೇಪರ್ ಓದಿಸುವಂತೆ ಸೂಚಿಸಲಾಗಿದೆ. ಈ ನಿಯಮವು ಸರ್ಕಾರಿ, ಅನುದಾನಿತ, ಖಾಸಗಿ ಮತ್ತು ವಸತಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಿಗೆ ಅನ್ವಯವಾಗಲಿದೆ.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ ಈ ಆದೇಶ ಹೊರಡಿಸಿದೆ. ಈಗಾಗಲೇ ಕೆಲವು ಶಾಲೆಗಳಲ್ಲಿ ಇದ್ದ ಪದ್ಧತಿಯನ್ನು ಈಗ ರಾಜ್ಯದಾದ್ಯಂತ ಕಡ್ಡಾಯಗೊಳಿಸಲಾಗಿದೆ.
ಈ ನಿರ್ಧಾರದಿಂದ ವಿದ್ಯಾರ್ಥಿಗಳಲ್ಲಿ ಓದುವ ಅಭ್ಯಾಸ ಬೆಳೆದು, ಮೊಬೈಲ್ ಬಳಕೆ ಕಡಿಮೆಯಾಗುವ ಜೊತೆಗೆ ಪ್ರಸ್ತುತ ಘಟನೆಗಳ ಬಗ್ಗೆ ಅರಿವು ಹೆಚ್ಚಲಿದೆ ಎಂದು ಇಲಾಖೆ ನಿರೀಕ್ಷಿಸಿದೆ.

