
ಕೋಲ್ಕತ್ತಾ: ಇವಿಎಂ ಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್ಗಳನ್ನು ಅಕ್ರಮವಾಗಿ ತೆರೆಯಲಾಗಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಡರಾತ್ರಿ ಪ್ರತಿಭಟನೆ ನಡೆಸಿದ ಘಟನೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ತಾವು ಸ್ಪರ್ಧಿಸಿರುವ ಭವಾನಿಪುರ ಕ್ಷೇತ್ರದ ಮತ ಎಣಿಕಾ ಕೇಂದ್ರವಾಗಿರುವ ಸಖಾವತ್ ಮೆಮೋರಿಯಲ್ ಸ್ಕೂಲ್ಗೆ ಮಮತಾ ಬ್ಯಾನರ್ಜಿ ಸ್ವತಃ ಭೇಟಿ ನೀಡಿ ಸುಮಾರು ನಾಲ್ಕು ಗಂಟೆಗಳ ಕಾಲ ಅಲ್ಲೇ ತಂಗಿದ್ದರು. ಈ ವೇಳೆ ಟಿಎಂಸಿ ಕಾರ್ಯಕರ್ತರು ಹಾಗೂ ನಾಯಕರು ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇವಿಎಂಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್ಗಳನ್ನು ಅಕ್ರಮವಾಗಿ ತೆರೆಯಲಾಗಿದೆ ಹಾಗೂ ಟ್ಯಾಂಪರಿಂಗ್ಗೆ ಸಂಚು ರೂಪಿಸಲಾಗಿದೆ ಎಂದು ಟಿಎಂಸಿ ಗಂಭೀರ ಆರೋಪ ಮಾಡಿದೆ. ಅಲ್ಲದೆ, ಸ್ಟ್ರಾಂಗ್ ರೂಮ್ ಒಳಭಾಗದಲ್ಲಿ ಅಪರಿಚಿತ ವ್ಯಕ್ತಿಗಳು ಸಂಚರಿಸುತ್ತಿರುವ ವಿಡಿಯೋಗಳನ್ನು ಸಹ ಪಕ್ಷ ಹಂಚಿಕೊಂಡಿದೆ.
ಈ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ, “ಇವಿಎಂಗಳನ್ನು ಕಾವಲು ಕಾಯಲು ಕಾರ್ಯಕರ್ತರು 24 ಗಂಟೆಗಳ ಕಾಲ ಎಚ್ಚರಿಕೆಯಿಂದ ಇರಬೇಕು. ಮಾಧ್ಯಮಗಳಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಮುಕ್ತವಾಗಿ ನೀಡಬೇಕು” ಎಂದು ಆಗ್ರಹಿಸಿದರು.
ಇನ್ನೊಂದೆಡೆ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಭಾರತೀಯ ಚುನಾವಣಾ ಆಯೋಗ, ಸ್ಟ್ರಾಂಗ್ ರೂಮ್ಗಳು ಸಂಪೂರ್ಣ ಸುರಕ್ಷಿತವಾಗಿದ್ದು ನಿಯಮಾನುಸಾರವೇ ಸೀಲ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಮನೋಜ್ ಅಗರ್ವಾಲ್ ಮಾತನಾಡಿ, “ಎಲ್ಲಾ ಇವಿಎಂ ಸ್ಟ್ರಾಂಗ್ ರೂಮ್ಗಳನ್ನು ಅಭ್ಯರ್ಥಿಗಳು, ಏಜೆಂಟರು ಹಾಗೂ ವೀಕ್ಷಕರ ಸಮ್ಮುಖದಲ್ಲೇ ಸೀಲ್ ಮಾಡಲಾಗಿದೆ. ಯಾವುದೇ ಭದ್ರತಾ ಉಲ್ಲಂಘನೆಯಾಗಿಲ್ಲ” ಎಂದು ತಿಳಿಸಿದ್ದಾರೆ.
ಟಿಎಂಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಾಣಿಸಿಕೊಂಡ ಚಟುವಟಿಕೆ ಇವಿಎಂಗೆ ಸಂಬಂಧಪಟ್ಟದ್ದಲ್ಲ. ಅದು ಪೋಸ್ಟಲ್ ಬ್ಯಾಲೆಟ್ಗಳನ್ನು ಕ್ಷೇತ್ರವಾರು ಪ್ರತ್ಯೇಕಿಸುವ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಸ್ಟ್ರಾಂಗ್ ರೂಮ್ ಹೊರಗಿನ ಕಾರಿಡಾರ್ನಲ್ಲಿ ನಡೆದಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

