
ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಭೀಕರ ದೋಣಿ ದುರಂತ ದೇಶವನ್ನೇ ಕಣ್ಣೀರಾಗಿಸಿದೆ. ಬಾರ್ಗಿ ಅಣೆಕಟ್ಟಿನಲ್ಲಿ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಕ್ರೂಸ್ ದೋಣಿ ಪ್ರಬಲ ಗಾಳಿ ಮತ್ತು ಅಲೆಗಳ ಪರಿಣಾಮ ಪಲ್ಟಿಯಾಗಿ 7 ಮಂದಿ ಸಾವನ್ನಪ್ಪಿದ್ದಾರೆ.
ಈ ದುರಂತದಲ್ಲಿ ನಾಲ್ಕು ವರ್ಷದ ಮಗುವನ್ನು ತನ್ನ ಎದೆಗೆ ಬಿಗಿಯಾಗಿ ತಬ್ಬಿಕೊಂಡ ಸ್ಥಿತಿಯಲ್ಲೇ ತಾಯಿ ಮೃತಳಾಗಿರುವ ದೃಶ್ಯ ರಕ್ಷಣಾ ಸಿಬ್ಬಂದಿಯನ್ನೇ ಕಣ್ಣೀರಾಗಿಸಿದೆ. ಮಗುವನ್ನು ಉಳಿಸಬೇಕೆಂಬ ತಾಯಿಯ ಕೊನೆಯ ಹೋರಾಟ ಎಲ್ಲರ ಮನಕಲಕಿದೆ.
30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ದೋಣಿ ಏಕಾಏಕಿ ಹವಾಮಾನ ವೈಪರೀತ್ಯದಿಂದ ಅಸ್ಥಿರಗೊಂಡು ನೀರಿನಿಂದ ತುಂಬತೊಡಗಿತು. ಕೆಲವೇ ಕ್ಷಣಗಳಲ್ಲಿ ದೋಣಿ ಮುಳುಗಿದ್ದು, ಪ್ರವಾಸಿಗರು ನೀರಿನಲ್ಲಿ ಕೊಚ್ಚಿಹೋದರು.
ಸ್ಥಳೀಯರು ಹಗ್ಗ ಹಾಗೂ ಲೈಫ್ ಜಾಕೆಟ್ ಸಹಾಯದಿಂದ ಕೆಲವರನ್ನು ರಕ್ಷಿಸಿದ್ದಾರೆ. ಸೇನೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಾತ್ರಿಯಿಡೀ ಶೋಧ ಕಾರ್ಯಾಚರಣೆ ಮುಂದುವರಿಸಿವೆ.
ಮೃತರ ಕುಟುಂಬಗಳಿಗೆ ಮಧ್ಯಪ್ರದೇಶ ಸರ್ಕಾರ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಈ ದುರಂತ ಮಧ್ಯಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

