
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ ನಡೆದ ಘಟನೆ ಒಂದು ಕ್ಷಣ ಆತಂಕ ಹುಟ್ಟಿಸಿದರೂ, ಕೊನೆಗೆ ಖುಷಿಯ ಅಂತ್ಯ ಕಂಡಿದೆ. ಕಾಫಿ ತೋಟದಲ್ಲಿ ಆಟವಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಒಂದೂವರೆ ವರ್ಷದ ಗಂಡು ಮಗುವನ್ನು ಪೊಲೀಸರು 12 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಪತ್ತೆ ಹಚ್ಚಿದ್ದಾರೆ.
ಮಧ್ಯಪ್ರದೇಶ ಮೂಲದ ಗೋನು ಹಾಗೂ ಸೋನು ದಂಪತಿ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರ ಮಗು ಇತರ ಮಕ್ಕಳ ಜೊತೆ ಆಟವಾಡುತ್ತಾ ಕಾಫಿ ತೋಟದೊಳಗೆ ಹೋಗಿ ಕಾಣೆಯಾಗಿತ್ತು. ಮಗು ಕಾಣೆಯಾಗುತ್ತಿದ್ದಂತೆಯೇ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ಆರಂಭಿಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ತಕ್ಷಣವೇ ಬಾಳೂರು ಪೊಲೀಸ್ ಠಾಣೆ ಸಿಬ್ಬಂದಿ, ಮೂಡಿಗೆರೆ ಸಿಪಿಐ ಹಾಗೂ ಪಿಎಸ್‌ಐ ನೇತೃತ್ವದಲ್ಲಿ ಭಾರೀ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ರಾತ್ರಿ ಪೂರ್ತಿ ತೋಟದ ವಿವಿಧ ಭಾಗಗಳಲ್ಲಿ ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದರು.
ಇಂದು ಬೆಳಗ್ಗೆ ತೋಟದೊಳಗೆ ಮಲಗಿದ್ದ ಸ್ಥಿತಿಯಲ್ಲಿ ಮಗು ಸುರಕ್ಷಿತವಾಗಿ ಪತ್ತೆಯಾಗಿದೆ. ಮಗುವನ್ನು ಕಂಡ ಕ್ಷಣ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇರಲಿಲ್ಲ. ಬಳಿಕ ಮಗುವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು.
ಪೊಲೀಸರ ಸಮಯೋಚಿತ ಕಾರ್ಯಾಚರಣೆಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

