
ಹಾಸನ: ಏಳು ತಿಂಗಳ ಹಿಂದೆ ಭೀಕರ ಕಾಳಗದಲ್ಲಿ ದಂತ ಕಳೆದುಕೊಂಡಿದ್ದ ಕಾಡಾನೆ ಭೀಮಾ ಇದೀಗ ಮತ್ತೆ ಕ್ಯಾಪ್ಟನ್ ಎದುರು ಕಾಳಗಕ್ಕೆ ಸಜ್ಜಾಗಿರುವಂತೆ ಕಾಣಿಸಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ ಭೀಮಾ ಹಾಗೂ ಕ್ಯಾಪ್ಟನ್ ಒಂದೇ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಎರಡೂ ಕಾಡಾನೆಗಳು ಮುಖಾಮುಖಿಯಾಗಿದ್ದರೂ, ಸುತ್ತಮುತ್ತ ಜನರು ಕಾಣಿಸಿಕೊಂಡ ಹಿನ್ನೆಲೆ ಕಾದಾಟ ನಡೆಸದೇ ಅಲ್ಲಿಂದ ಒಟ್ಟಿಗೆ ಸಾಗಿವೆ. ಆದರೆ ಆನೆಗಳ ವರ್ತನೆ ಗಮನಿಸಿದ ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಭಯಭೀತರಾಗಿದ್ದಾರೆ.
ಕಳೆದ ವರ್ಷ ನವೆಂಬರ್ 9ರಂದು ಜಗಬೋರನಹಳ್ಳಿ ಗ್ರಾಮದ ಬಳಿ ಭೀಮಾ ಹಾಗೂ ಕ್ಯಾಪ್ಟನ್ ನಡುವೆ ಭೀಕರ ಕಾಳಗ ನಡೆದಿತ್ತು. ಆ ವೇಳೆ ಆಕ್ರೋಶಗೊಂಡ ಭೀಮಾ ಮರಕ್ಕೆ ಗುದ್ದಿಕೊಂಡ ಪರಿಣಾಮ ಅದರ ಒಂದು ದಂತ ಮುರಿದು ಬಿದ್ದಿತ್ತು. ಈ ಘಟನೆ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಈಗ ಮತ್ತೆ ಎರಡೂ ಕಾಡಾನೆಗಳು ಒಂದೇ ಭಾಗದಲ್ಲಿ ಕಾಣಿಸಿಕೊಂಡಿರುವುದರಿಂದ ಮತ್ತೊಮ್ಮೆ ಕಾಳಗ ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿದೆ. ಸ್ಥಳದಲ್ಲಿ ಇಟಿಎಫ್ ಸಿಬ್ಬಂದಿ ಆನೆಗಳ ಚಲನವಲನಗಳ ಮೇಲೆ ನಿಗಾ ವಹಿಸಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ.

