
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಕಳೆದ 15 ದಿನಗಳಲ್ಲಿ ನಗರದ ಬಹುತೇಕ ಎಲ್ಲಾ ತರಕಾರಿಗಳ ಬೆಲೆ ದುಪ್ಪಟ್ಟಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ವಿಶೇಷವಾಗಿ ಬೀನ್ಸ್ ದರ ಕೆಜಿಗೆ ₹160 ತಲುಪಿರುವುದು ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ ಹಾಗೂ ಅಕಾಲಿಕ ಮಳೆಯಿಂದ ತರಕಾರಿ ಬೆಳೆಗಳಿಗೆ ಭಾರಿ ಹಾನಿಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಭಾಗಗಳಲ್ಲಿ ಬೆಳೆ ನಾಶವಾಗಿರುವುದರಿಂದ ಮಾರುಕಟ್ಟೆಗೆ ಬರುವ ತರಕಾರಿಗಳ ಪ್ರಮಾಣ ಶೇ.30 ರಿಂದ 40ರಷ್ಟು ಕುಸಿದಿದೆ.
ಇದರಿಂದ ಬೇಡಿಕೆಗೆ ತಕ್ಕಷ್ಟು ಪೂರೈಕೆ ಸಾಧ್ಯವಾಗದೆ ತರಕಾರಿ ದರಗಳು ಗಗನಕ್ಕೇರಿವೆ. ಅದರಲ್ಲೂ ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ ಹಿನ್ನೆಲೆ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೊರ ರಾಜ್ಯಗಳಿಂದ ತರಕಾರಿ ಸಾಗಾಟದ ವೆಚ್ಚ ಕೂಡ ಏರಿಕೆಗೆ ಕಾರಣವಾಗಿದೆ.
ಈ ಹಿಂದೆ ₹500ಕ್ಕೆ ಚೀಲ ತುಂಬಾ ತರಕಾರಿ ಖರೀದಿಸುತ್ತಿದ್ದ ಜನ, ಈಗ ಅದೇ ಹಣಕ್ಕೆ ಎರಡು ಬ್ಯಾಗ್ ತರಕಾರಿ ಕೂಡ ತುಂಬಿಸಲು ಪರದಾಡುತ್ತಿದ್ದಾರೆ. ಹೋಟೆಲ್ ಉದ್ಯಮ ಈಗಾಗಲೇ ಎಲ್ಪಿಜಿ ದರ ಏರಿಕೆಯಿಂದ ಸಂಕಷ್ಟದಲ್ಲಿದ್ದು, ಇದೀಗ ತರಕಾರಿ ಬೆಲೆ ಏರಿಕೆಯೂ ಮತ್ತಷ್ಟು ಹೊರೆ ತಂದಿದೆ.
ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆಗಳಿಂದಾಗಿ ಮಧ್ಯಮ ವರ್ಗ ಮತ್ತು ಸಾಮಾನ್ಯ ಜನರ ಬದುಕು ಮತ್ತಷ್ಟು ದುಬಾರಿಯಾಗುತ್ತಿದೆ.


