ಅಕ್ರಮ ಅಕ್ಕಿ ಸಾಗಾಣೆದಾರರಿಂದ 3 ಲಕ್ಷ ವಸೂಲಿ ಆರೋಪ: ಬಳ್ಳಾರಿ ಎಸ್ಪಿ ಗನ್‌ಮ್ಯಾನ್ ಅಂದರ್

ಬಳ್ಳಾರಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಣೆ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. ಜಿಲ್ಲೆಯ ಎಸ್ಪಿ ಸುಮನ್ ಡಿ. ಪನ್ನೇಕರ್ ಅವರ ಗನ್‌ಮ್ಯಾನ್ ದೇವರಾಜ್‌ರನ್ನು ಮೋಕಾ ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದವರಿಂದ ಹಣ ವಸೂಲಿ ಮಾಡಿದ ಆರೋಪದಡಿ ದೇವರಾಜ್ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಡಕೇರಿಯಿಂದ ಆಂಧ್ರಪ್ರದೇಶದತ್ತ ಪಡಿತರ ಅಕ್ಕಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಆರೋಪಿಗಳು ಅಡ್ಡಗಟ್ಟಿದ್ದರು ಎನ್ನಲಾಗಿದೆ. ತಾವು ಎಸ್ಪಿ ಸ್ಕ್ವಾಡ್ ಅಧಿಕಾರಿಗಳು ಎಂದು ಹೇಳಿಕೊಂಡು ಮೊದಲಿಗೆ ಐದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದು, ಬಳಿಕ ಮೂರು ಲಕ್ಷ ರೂಪಾಯಿ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ.

ಹಣ ನೀಡದಿದ್ದರೆ ಲಾರಿಗಳನ್ನು ಸೀಜ್ ಮಾಡಿ ಜೈಲಿಗೆ ಕಳುಹಿಸುವುದಾಗಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಶರಭಯ್ಯ ಎಂಬುವವರು ಮೋಕಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಗನ್‌ಮ್ಯಾನ್ ದೇವರಾಜ್ ಎಸ್ಪಿ ಸ್ಕ್ವಾಡ್ ಹೆಸರಿನಲ್ಲಿ ಹಣ ವಸೂಲಿ ಮಾಡಿರುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆ ಖುದ್ದು ಎಸ್ಪಿ ಸುಮನ್ ಡಿ. ಪನ್ನೇಕರ್ ಅವರೇ ಕ್ರಮ ಕೈಗೊಂಡು ದೇವರಾಜ್ ಬಂಧನಕ್ಕೆ ಸೂಚನೆ ನೀಡಿದ್ದಾರೆ.

ಸದ್ಯ ಮೋಕಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಪ್ರಕರಣ ಮತ್ತಷ್ಟು ತಿರುವು ಪಡೆಯುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *