ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಕೊರತೆ – ರೋಗಿಗಳ ಪರದಾಟ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಭಾರೀ ಅವ್ಯವಸ್ಥೆ ಬಯಲಾಗಿದೆ.
ಆಸ್ಪತ್ರೆಯಲ್ಲಿ ಅಗತ್ಯ ಔಷಧಗಳ ಕೊರತೆಯಿಂದ ಬಡ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಪ್ರತಿದಿನ ನೂರಾರು ಜನರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದರೂ, ಜ್ವರ ಮತ್ತು ಗ್ಯಾಸ್ಟ್ರಿಕ್ ಮಾತ್ರೆಗಳನ್ನು ಹೊರತುಪಡಿಸಿ ಪ್ರಮುಖ ಆಂಟಿಬಯೋಟಿಕ್ ಔಷಧಗಳು ಲಭ್ಯವಿಲ್ಲ ಎಂಬ ಆರೋಪ ಕೇಳಿಬಂದಿದೆ.

ವೈದ್ಯರು ಬರೆದುಕೊಡುವ ಬಹುತೇಕ ಮದ್ದುಗಳು ಆಸ್ಪತ್ರೆಯ ಫಾರ್ಮಸಿಯಲ್ಲಿ ಸಿಗುತ್ತಿಲ್ಲ.
ಆಂಟಿಬಯೋಟಿಕ್ ಚುಚ್ಚುಮದ್ದುಗಳ ಕೊರತೆಯೂ ಎದುರಾಗಿದ್ದು, ಲಭ್ಯವಿರುವ ಕೆಲವೇ ಇಂಜೆಕ್ಷನ್‌ಗಳ ಮೂಲಕ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.

ಇದೇ ವೇಳೆ ಆಸ್ಪತ್ರೆಯಲ್ಲಿ ಎಕ್ಸ್‌ರೇ ಫಿಲ್ಮ್ ಶೀಟ್ ಕೊರತೆಯೂ ತಲೆದೋರಿದೆ.
ಎಕ್ಸ್‌ರೇ ಮಾಡಿಸಿಕೊಂಡ ರೋಗಿಗಳು ತಮ್ಮ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡೇ ಮನೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಔಷಧಗಳಿಗಾಗಿ ಹಲವು ಬಾರಿ ಇಂಡೆಂಟ್ ಸಲ್ಲಿಸಿದ್ದರೂ ಸರಬರಾಜು ಆಗಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಯೇ ಒಪ್ಪಿಕೊಂಡಿದ್ದಾರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಬಜೆಟ್‌ಗೆ ಕತ್ತರಿ ಬಿದ್ದಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ದೇವನಹಳ್ಳಿ ತಾಲೂಕು ಆಸ್ಪತ್ರೆಯ ಸ್ಥಿತಿಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಡವರ ಆರೋಗ್ಯ ಸೇವೆಯತ್ತ ಸರ್ಕಾರ ತಕ್ಷಣ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *