
ಹಿಟ್ಲರ್ ಕಲ್ಯಾಣ ಖ್ಯಾತಿಯ ನಟ ದಿಲೀಪ್ ರಾಜ್ ನಿಧನ: ಕನ್ನಡ ಚಿತ್ರರಂಗದಲ್ಲಿ ಶೋಕ
ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದಿಂದ ಗುರುತಿಸಿಕೊಂಡಿದ್ದ ನಟ ದಿಲೀಪ್ ರಾಜ್ ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.
‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಮೂಲಕ ಕಿರುತೆರೆಗೆ ಶಕ್ತಿಶಾಲಿ ಕಮ್ಬ್ಯಾಕ್ ಮಾಡಿದ್ದ ದಿಲೀಪ್ ರಾಜ್, ತಮ್ಮ ಪಾತ್ರದ ಮೂಲಕ ವೀಕ್ಷಕರ ಮನಸ್ಸನ್ನು ಗೆದ್ದಿದ್ದರು. ಸಿನಿಮಾ ಮತ್ತು ಟಿವಿ ಎರಡರಲ್ಲೂ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದ ಅವರು ನಟನ ಜೊತೆಗೆ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು.
2005ರಲ್ಲಿ ಬಿಡುಗಡೆಯಾದ ‘ಬಾಯ್ಫ್ರೆಂಡ್’ ಸಿನಿಮಾದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು ನಂತರ ‘ಮಿಲನ’ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಹೆಚ್ಚು ಗಮನ ಸೆಳೆದರು. ‘ಸುಗ್ರೀವ’, ‘ಗೆಳೆಯ’, ‘ಯೂಟರ್ನ್’ ಸೇರಿದಂತೆ ಸುಮಾರು 28ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಇತ್ತೀಚೆಗೆ ಅವರು ‘ಕೃಷ್ಣ ರುಕ್ಕು’ ಧಾರಾವಾಹಿಯನ್ನು ನಿರ್ಮಿಸುತ್ತಿದ್ದರು. ಜೊತೆಗೆ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಮನೆಯೊಂದು ಮೂರು ಬಾಗಿಲು, ರಥಸಪ್ತಮಿ ಮತ್ತು ಪ್ರೀತಿಗಾಗಿ ಧಾರಾವಾಹಿಗಳಲ್ಲಿಯೂ ಅವರು ಅಭಿನಯಿಸಿದ್ದರು.
ಹೃದಯಾಘಾತ ಸಂಭವಿಸಿದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಪಾರ್ಥಿವ ಶರೀರವನ್ನು ಕುಮಾರಸ್ವಾಮಿ ಲೇಔಟ್ನ ಅಪೋಲೊ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ದಿಲೀಪ್ ರಾಜ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

