ORRನಲ್ಲಿ ಭೀಕರ ಅಪಘಾತ – ತೆಲುಗು ನಟ ಭರತ್ ಕಾಂತ್ ಸ್ಥಳದಲ್ಲೇ ಸಾವು

ಹೈದರಾಬಾದ್: ಹೊರ ವರ್ತುಲ ರಸ್ತೆ (ORR) ಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ಹಾಗೂ ಅವರ ಸ್ನೇಹಿತ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಆದಿಬಟ್ಲಾ ಸಮೀಪ ಭಾನುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಆಂಧ್ರಪ್ರದೇಶದ ನೆಲ್ಲೂರು ಮೂಲದ ಕೆ. ಭರತ್ ಕಾಂತ್ ಹಾಗೂ ಜಿ. ಸಾಯಿ ತ್ರಿಲೋಕ್ ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಇಬ್ಬರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲನೆ ಮಾಡುತ್ತಿದ್ದ ಭರತ್ ಕಾಂತ್ ನಿಯಂತ್ರಣ ಕಳೆದುಕೊಂಡು ಮುಂದೆ ಸಾಗುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಲಾರಿಯ ಹಿಂದಿನ ಚಕ್ರಗಳೇ ಕಳಚಿ ಬಿದ್ದಿವೆ. ಭೀಕರ ಡಿಕ್ಕಿಯಿಂದ ಭರತ್ ಕಾಂತ್ ಹಾಗೂ ಸಾಯಿ ತ್ರಿಲೋಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಲಾಗಿದೆ.

31 ವರ್ಷದ ಭರತ್ ಕಾಂತ್ ತೆಲುಗು ಡಿಜಿಟಲ್ ಲೋಕದಲ್ಲಿ ನರ್ತಕ ಹಾಗೂ ನಟನಾಗಿ ಜನಪ್ರಿಯರಾಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 40 ಸಾವಿರ ಹಾಗೂ ಯೂಟ್ಯೂಬ್‌ನಲ್ಲಿ 30 ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು.

ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದ ಭರತ್ ಕಾಂತ್, ತೆಲುಗು ಸಿನಿಮಾಗಳು ಹಾಗೂ ‘ಟೆನೆಂಟ್’, ‘ಗ್ರಾಮಮ್’ ಸೇರಿ ಹಲವು ಕಿರುಚಿತ್ರಗಳಲ್ಲಿಯೂ ನಟಿಸಿದ್ದರು. ಯುವ ನಟನ ಅಕಾಲಿಕ ನಿಧನಕ್ಕೆ ಅಭಿಮಾನಿಗಳು ಮತ್ತು ಸಿನಿರಂಗದವರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *