
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜನಪ್ರಿಯ ಹೆಣ್ಣು ಜಿರಾಫೆ ‘ಶಿವಾನಿ’ ಮೃತಪಟ್ಟಿರುವುದು ಪ್ರವಾಸಿಗರು ಮತ್ತು ಸಿಬ್ಬಂದಿಗೆ ಆಘಾತ ತಂದಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 3 ವರ್ಷ 10 ತಿಂಗಳ ಶಿವಾನಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.
ಮೇ 3ರಿಂದ ಆಹಾರ ಸೇವನೆ ನಿಲ್ಲಿಸಿದ್ದ ಜಿರಾಫೆಯನ್ನು ಪಶುವೈದ್ಯರ ತಂಡ ನಿಗಾದಲ್ಲಿಟ್ಟು ಚಿಕಿತ್ಸೆ ನೀಡುತ್ತಿತ್ತು. ಆದರೆ ಗುರುವಾರ ಬೆಳಗ್ಗೆ ಸುಮಾರು 11 ಗಂಟೆಗೆ ಶಿವಾನಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಸ್ಟ್ಮಾರ್ಟಂ ವರದಿಯಲ್ಲಿ ‘ಸಿಕಲ್ ಟಾರ್ಷನ್’ ಎಂಬ ಗಂಭೀರ ಆರೋಗ್ಯ ಸಮಸ್ಯೆಯಿಂದ ಕರುಳು ಸುತ್ತಿಕೊಂಡು ರಕ್ತಪರಿಚಲನೆ ಸ್ಥಗಿತಗೊಂಡಿದ್ದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಹೆಚ್ಚಿನ ಪರೀಕ್ಷೆಗಾಗಿ ಮಾದರಿಗಳನ್ನು ಹೆಬ್ಬಾಳದ ಪಶು ಆರೋಗ್ಯ ಮತ್ತು ಪಶುವೈದ್ಯಕೀಯ ಜೈವಿಕ ಸಂಸ್ಥೆಗೆ ಕಳುಹಿಸಲಾಗಿದೆ.
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ 2022ರಲ್ಲಿ ಜನಿಸಿದ್ದ ಶಿವಾನಿಯನ್ನು, ಬನ್ನೇರುಘಟ್ಟದಲ್ಲಿದ್ದ ಏಕೈಕ ಜಿರಾಫೆ ‘ಗೌರಿ’ಗೆ ಸಂಗಾತಿಯಾಗಿ 2024ರಲ್ಲಿ ವಿಶೇಷ ಭದ್ರತೆಯೊಂದಿಗೆ ತರಲಾಗಿತ್ತು. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ಶಿವಾನಿಯ ಸಾವು ಇದೀಗ ಮೃಗಾಲಯದಲ್ಲಿ ದುಃಖದ ವಾತಾವರಣ ನಿರ್ಮಿಸಿದೆ.

