ಹೊಸಪೇಟೆ ಮದುವೆ ಮಂಟಪದಲ್ಲಿ ಬಂಗಾರ-ಬೆಳ್ಳಿ ಕಳ್ಳತನ: CCTVನಲ್ಲಿ ಕಳ್ಳನ ಎಸ್ಕೇಪ್ ದೃಶ್ಯ ಸೆರೆ

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೆಚ್ಚಿಬೀಳಿಸುವ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಸಿದ್ಧಿಪ್ರಿಯ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದ ಮಧ್ಯೆಯೇ ಕಳ್ಳನೊಬ್ಬ ವಧುವಿಗೆ ಹಾಕಬೇಕಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳಿದ್ದ ಬ್ಯಾಗ್ ಕದ್ದೊಯ್ದಿದ್ದಾನೆ.

ಮೇ 4ರಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಕಳ್ಳ ಬ್ಯಾಗ್ ಸಮೇತ ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳತನಗೊಂಡ ವಸ್ತುಗಳಲ್ಲಿ 40 ಗ್ರಾಂ ಚಿನ್ನದ ಸರ, ಅರ್ಧ ಕೆಜಿ ಬೆಳ್ಳಿ, 10 ಸಾವಿರ ರೂಪಾಯಿ ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳಿವೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಘಟನೆ ಸಂಬಂಧ ದೂರು ನೀಡಲು ಮುಂದಾದರೂ ಪೊಲೀಸರು FIR ದಾಖಲಿಸಿಕೊಳ್ಳಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಒಂದೇ ಬಿಲ್‌ನಲ್ಲಿ ನಾಲ್ಕು ಐಟಂಗಳು ಇದ್ದು, ಉಳಿದ ವಸ್ತುಗಳನ್ನು ತರಲು ಸೂಚನೆ ನೀಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಇದೇ ವೇಳೆ ಹೊಸಕೋಟೆಯ ನಂದಶ್ರೀ ಕಲ್ಯಾಣ ಮಂಟಪದ ಬಳಿ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಬೈಕ್‌ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಸ್ಕೂಟಿಯ ಹ್ಯಾಂಡಲ್ ಲಾಕ್ ಮುರಿದು ವಾಹನ ಕಳವು ಮಾಡಿರುವ ದೃಶ್ಯ CCTVನಲ್ಲಿ ದಾಖಲಾಗಿದೆ.

ಸತತ ಕಳ್ಳತನ ಪ್ರಕರಣಗಳಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *