ಚಿಕ್ಕಬಳ್ಳಾಪುರದಲ್ಲಿ ವಿಚಿತ್ರ ಘಟನೆ: ಕದ್ದ ಮಾಂಗಲ್ಯ ಸರ 2 ದಿನಗಳ ಬಳಿಕ ಮನೆ ಮುಂದೆ ಪ್ರತ್ಯಕ್ಷ!

ಚಿಕ್ಕಬಳ್ಳಾಪುರದಲ್ಲಿ ಅಚ್ಚರಿಯ ಘಟನೆ ಒಂದು ನಡೆದಿದ್ದು, ಕಳುವಾಗಿದ್ದ ಮಹಿಳೆಯ ಮಾಂಗಲ್ಯ ಸರ ಎರಡು ದಿನಗಳ ಬಳಿಕ ಮತ್ತೆ ಅವರ ಮನೆ ಬಳಿಯೇ ಪತ್ತೆಯಾಗಿದೆ.

ನಗರದ ವಾರ್ಡ್ ನಂಬರ್ 23ರ ಚಾಮರಾಜಪೇಟೆಯಲ್ಲಿ ಮೇ 3ರಂದು ಈ ಘಟನೆ ನಡೆದಿತ್ತು. ಮನೆಯ ಮುಂದೆ ನೀರಿನ ಸಂಪ್ ಪರಿಶೀಲಿಸುತ್ತಿದ್ದ ವೇಳೆ ಗೃಹಿಣಿ ಪ್ರಿಯಾ ಅವರ ಕುತ್ತಿಗೆಯಿಂದ ಇಬ್ಬರು ದುಷ್ಕರ್ಮಿಗಳು ಮಾಂಗಲ್ಯ ಸರ ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು.

ಪಲ್ಸರ್ 220 ಬೈಕ್‌ನಲ್ಲಿ ಬಂದಿದ್ದ ಆರೋಪಿಗಳಲ್ಲಿ ಒಬ್ಬ ಬೈಕ್‌ನಿಂದ ಇಳಿದು ಸರ ಕಿತ್ತುಕೊಂಡಿದ್ದರೆ, ಮತ್ತೊಬ್ಬ ಬೈಕ್‌ನ್ನು ಆನ್‌ನಲ್ಲಿಯೇ ಇಟ್ಟುಕೊಂಡು ನಿಂತಿದ್ದ ಎಂದು ತಿಳಿದುಬಂದಿದೆ. ಆರೋಪಿಗಳ ಬಳಿ ಮಾರಕಾಸ್ತ್ರಗಳೂ ಇದ್ದವು ಎನ್ನಲಾಗಿದೆ.

ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು.

ಈ ನಡುವೆ ಮೇ 5ರಂದು ಬೆಳಿಗ್ಗೆ ಪ್ರಿಯಾ ಅವರ ಪತಿ ಮನೆಯ ಬಾತ್‌ರೂಂ ಮೆಟ್ಟಿಲಿನ ಬಳಿ ಚಿನ್ನದ ಸರ ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಕದ್ದ ಸರವನ್ನು ಮತ್ತೆ ಮನೆ ಬಳಿ ಇಟ್ಟು ಹೋಗಿರುವುದು ಸ್ಥಳೀಯರಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಕಳ್ಳರು ಯಾರು? ಏಕೆ ಹೀಗೆ ಮಾಡಿದ್ದಾರೆ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

Leave a Reply

Your email address will not be published. Required fields are marked *