LPG ಬಳಿಕ ಪೆಟ್ರೋಲ್ ಸಂಕಷ್ಟ: ಬೆಂಗಳೂರಿನಲ್ಲಿ ವಾಹನ ಸವಾರರ ಆಕ್ರೋಶ

ಬೆಂಗಳೂರು ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. HP ಮತ್ತು ಭಾರತ್ ಪೆಟ್ರೋಲಿಯಂ ಬಂಕ್‌ಗಳಲ್ಲಿ ಇಂಧನ ದಾಸ್ತಾನು ಖಾಲಿಯಾಗಿದ್ದು, ವಾಹನ ಸವಾರರು ಬಂಕ್‌ಗಳ ಮುಂದೆ ಉದ್ದ ಸಾಲಿನಲ್ಲಿ ನಿಂತು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಖಾಸಗಿ ಬಂಕ್‌ಗಳಾದ ಶೆಲ್, ಜಿಯೋ ಮತ್ತು ನಯಾರಾ ಬಂಕ್‌ಗಳಲ್ಲಿ ಬೆಲೆ ಹೆಚ್ಚಾಗಿರುವುದರಿಂದ ಹೆಚ್ಚಿನ ಜನರು ಸರ್ಕಾರಿ ಸ್ವಾಮ್ಯದ ಬಂಕ್‌ಗಳತ್ತ ಮುಖ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಸಾರ್ವಜನಿಕ ಬಂಕ್‌ಗಳಲ್ಲಿ ಬೇಡಿಕೆ ಏರಿಕೆಯಾಗಿದ್ದು, ಡಿಪೋಗಳಿಂದ ಸರಿಯಾದ ಸಮಯಕ್ಕೆ ಇಂಧನ ಸರಬರಾಜು ಆಗುತ್ತಿಲ್ಲ ಎನ್ನಲಾಗಿದೆ.

ಇತ್ತೀಚೆಗೆ ಆಟೋ LPG ಮತ್ತು ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ಬೆಂಗಳೂರು ಜನರು ಸಂಕಷ್ಟ ಅನುಭವಿಸಿದ್ದರೆ, ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯೂ ಹೊಸ ಆತಂಕ ಹುಟ್ಟಿಸಿದೆ. ಕೆಲವು ಬಂಕ್‌ಗಳಿಗೆ ಇಂದು ಇಂಧನ ಬಂದಿದೆಯಾದರೂ, ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ ಕಾರಣ ವಾಹನ ಸವಾರರು ಕಂಗಾಲಾಗಿದ್ದಾರೆ.

ತೈಲ ಕಂಪನಿಗಳಿಂದ ಇನ್ನೂ ಸ್ಪಷ್ಟ ಮಾಹಿತಿ ಸಿಗದ ಹಿನ್ನೆಲೆ, ಇಂಧನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಭೀತಿ ಎದುರಾಗಿದೆ.

Leave a Reply

Your email address will not be published. Required fields are marked *