ಬೆಂಗಳೂರಿನಲ್ಲಿ ಬೆಳಗ್ಗೆಯೇ ಭಾರಿ ಮಳೆ, 3 ದಿನ ಯೆಲ್ಲೋ ಅಲರ್ಟ್

ಬೆಂಗಳೂರು ನಗರದಲ್ಲಿ ಬೆಳಗ್ಗೆಯೇ ಮಳೆರಾಯ ಅಬ್ಬರಿಸಿದ್ದು, ನಗರದ ಹಲವೆಡೆ ಭಾರಿ ಮಳೆಯಾಗಿದೆ. ಮೆಜೆಸ್ಟಿಕ್‌, ಶಾಂತಿನಗರ, ಕೆಆರ್ ಮಾರ್ಕೆಟ್‌, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುರಿದ ಮಳೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೋಮವಾರ ಬೆಳಗಿನ ಜಾವದಿಂದಲೇ ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಕೆಲವೇ ಕ್ಷಣಗಳಲ್ಲಿ ಏಕಾಏಕಿ ಭಾರಿ ಮಳೆ ಆರಂಭವಾಗಿದ್ದು, ಜನರು ಆಶ್ರಯಕ್ಕಾಗಿ ಓಡಾಡುವ ಪರಿಸ್ಥಿತಿ ಕಂಡುಬಂತು.

ಮೆಜೆಸ್ಟಿಕ್‌, ಕೆಆರ್ ಮಾರ್ಕೆಟ್‌, ರಾಜಾಜಿನಗರ, ಮಲ್ಲೇಶ್ವರ, ಮಹಾಲಕ್ಷ್ಮಿ ಲೇಔಟ್‌, ನಂದಿನಿ ಲೇಔಟ್‌, ಯಶವಂತಪುರ ಸೇರಿದಂತೆ ಹಲವೆಡೆ ಮಳೆಯ ಅಬ್ಬರ ಜೋರಾಗಿತ್ತು. ಬೆಳಗಿನ ವ್ಯಾಪಾರ ಜೋರಾಗಿದ್ದ ಕೆಆರ್ ಮಾರ್ಕೆಟ್‌ನಲ್ಲಿ ಮಳೆಯಿಂದ ವ್ಯಾಪಾರಿಗಳು ಹಾಗೂ ಗ್ರಾಹಕರು ತೀವ್ರ ತೊಂದರೆ ಅನುಭವಿಸಿದರು.

ಹಲವೆಡೆ ರಸ್ತೆಗಳ ಮೇಲೆ ನೀರು ನಿಂತ ಪರಿಣಾಮ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗಿತು. ಕೆಲಸಕ್ಕೆ ತೆರಳುತ್ತಿದ್ದ ಜನರು ಟ್ರಾಫಿಕ್ ಹಾಗೂ ಮಳೆಯ ನಡುವೆ ಪರದಾಡುವಂತಾಯಿತು. ಕೆಲ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ವರದಿಯೂ ಕೇಳಿಬಂದಿದೆ.

ಇನ್ನೂ ಬೆಂಗಳೂರಿನಲ್ಲಿ ಮುಂದಿನ 72 ಗಂಟೆಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂಜೆ ಹಾಗೂ ರಾತ್ರಿ ವೇಳೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಯ ಸಮಯದಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.

Leave a Reply

Your email address will not be published. Required fields are marked *