
ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಹೃದಯ ಕಲುಕುವ ಹಾಗೂ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತನ್ನ ಮೃತ ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಕೇವಲ 19,300 ರೂಪಾಯಿಗಳನ್ನು ಪಡೆಯಲು ವ್ಯಕ್ತಿಯೊಬ್ಬ ಅಸ್ಥಿಪಂಜರ ಹೊತ್ತು ಬ್ಯಾಂಕ್ಗೆ ಬಂದಿದ್ದಾನೆ.
ಜಿತು ಮುಂಡಾ ಎಂಬ ಈ ವ್ಯಕ್ತಿ, ಸಹೋದರಿ ಕಾಕ್ರಾ ಮುಂಡಾ ನಿಧನವಾದ ನಂತರ ಹಣ ಪಡೆಯಲು ಬ್ಯಾಂಕ್ ಸಂಪರ್ಕಿಸಿದ್ದರು. ಆದರೆ ಖಾತೆದಾರರು ಸ್ವತಃ ಬರಬೇಕು ಅಥವಾ ಕಾನೂನುಬದ್ಧ ದಾಖಲೆಗಳನ್ನು ನೀಡಬೇಕು ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ ಕಾರಣ, ಅವನಿಗೆ ಯಾವುದೇ ದಾರಿ ಕಾಣಿಸಲಿಲ್ಲ.
ಬಡತನ ಮತ್ತು ಅರಿವು ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ ಜಿತು, ಕೊನೆಗೆ ಹಳ್ಳಿಯ ಸ್ಮಶಾನಕ್ಕೆ ತೆರಳಿ ಸಹೋದರಿಯ ಅವಶೇಷಗಳನ್ನು ತೆಗೆದು, ಬಟ್ಟೆಯಲ್ಲಿ ಸುತ್ತಿಕೊಂಡು ಸುಮಾರು 3 ಕಿಲೋಮೀಟರ್ ನಡೆದು ಬ್ಯಾಂಕ್ಗೆ ಬಂದಿದ್ದಾನೆ.
ಈ ದೃಶ್ಯ ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಬ್ಯಾಂಕ್ ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ಘಟನೆ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ನಿಯಮಗಳು ಮತ್ತು ಮೂಲಭೂತ ಜ್ಞಾನ ಕೊರತೆ ಜನರನ್ನು ಎಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

