
ದಾವಣಗೆರೆ: ಹರಿಹರದಲ್ಲಿರುವ ಪಂಚಮಸಾಲಿ ಗುರುಪೀಠದಲ್ಲಿ ಲೆಕ್ಕ ಮಂಡನೆ ವಿಚಾರವಾಗಿ ಭಾರೀ ಹೈಡ್ರಾಮಾ ನಡೆದಿದೆ. 18 ವರ್ಷಗಳ ಲೆಕ್ಕ ನೀಡಲು ಟ್ರಸ್ಟಿಗಳು ಮುಂದಾದ ವೇಳೆ, ಮಠದ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಟ್ರಸ್ಟಿಗಳು ಮಠಕ್ಕೆ ಆಗಮಿಸುತ್ತಿದ್ದಂತೆ, ವಚನಾನಂದ ಸ್ವಾಮೀಜಿಗಳ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಕಳ್ಳ… ಕಳ್ಳ…” ಎಂದು ಕೂಗಿದ ಭಕ್ತರು ಟ್ರಸ್ಟಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ತಾರಕಕ್ಕೇರಿ, ಪರಿಸ್ಥಿತಿ ಹತೋಟಿ ತಪ್ಪಿತು.
ಸುದ್ದಿಗೋಷ್ಠಿ ಆರಂಭವಾಗುತ್ತಿದ್ದಂತೆ ರಾಣಿಬೆನ್ನೂರು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ತೀವ್ರಗೊಂಡಿತು. ಕಲ್ಲು, ಚಪ್ಪಲಿ ಹಾಗೂ ನೀರಿನ ಬಾಟಲ್‌ಗಳನ್ನು ತೂರಿ ಆಕ್ರೋಶ ಹೊರಹಾಕಲಾಯಿತು.
ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸಪಟ್ಟರು. ಇದೇ ವೇಳೆ, ಲೆಕ್ಕ ಮಂಡನೆ ವೇಳೆ ಕರೆಂಟ್ ಕಟ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಮತ್ತಷ್ಟು ಉದ್ವಿಗ್ನತೆ ಉಂಟಾಯಿತು. ಬಳಿಕ ಪೊಲೀಸರು ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಿದರು.
ಘಟನೆ ಸಂಬಂಧ ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಮಠದ ಈ ಪರಿಸ್ಥಿತಿಗೆ ಸ್ವಾಮೀಜಿಯೇ ಕಾರಣ ಎಂದು ಆರೋಪಿಸಿದ್ದಾರೆ. ಇನ್ನೊಂದೆಡೆ, ವಚನಾನಂದ ಶ್ರೀಗಳು ತಮ್ಮ ಬೆಂಬಲಿಗರಿಗೆ ಆಹಾರ ವಿತರಿಸಿ ಶಾಂತಿ ಕಾಪಾಡಲು ಪ್ರಯತ್ನಿಸಿದರು.
ಈ ಘಟನೆಯಿಂದ ಹರಿಹರ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

