
ಬೆಂಗಳೂರು: ನಗರದ Bengaluru ಪಾದರಾಯನಪುರ ಮುಖ್ಯರಸ್ತೆಯಲ್ಲಿ ಅಚ್ಚರಿ ಹುಟ್ಟಿಸುವ ಘಟನೆ ಬೆಳಕಿಗೆ ಬಂದಿದೆ. ಒಂದೇ ಸ್ಕೂಟರ್ನಲ್ಲಿ 6 ಅಪ್ರಾಪ್ತರು ಸವಾರಿ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಪಾದರಾಯನಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬೈಕ್ ಸವಾರರೊಬ್ಬರು ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸ್ಕೂಟರ್ನಲ್ಲಿ ಒಬ್ಬ ಚಾಲಕ ಸೇರಿದಂತೆ ಒಟ್ಟು 6 ಮಂದಿ ಮಕ್ಕಳು ಸವಾರಿ ಮಾಡುತ್ತಿರುವುದು ಕಂಡುಬಂದಿದೆ.
ಮಾಹಿತಿಯ ಪ್ರಕಾರ, ಏಪ್ರಿಲ್ 26ರಂದು ಬೆಳಿಗ್ಗೆ 10:45ರ ಸುಮಾರಿಗೆ KA05-JZ-9065 ನೋಂದಣಿ ಸಂಖ್ಯೆಯ ಸ್ಕೂಟರ್ನಲ್ಲಿ ಈ ಘಟನೆ ನಡೆದಿದೆ. ಗೌರಿಪಾಳ್ಯ ಸಮೀಪದ ಆಟೋ ಗ್ಯಾಸ್ ಮುಂದೆ ಮಕ್ಕಳು ಹೀಗೆ ಅಪಾಯಕರವಾಗಿ ಸಂಚರಿಸಿರುವುದು ಗಮನ ಸೆಳೆದಿದೆ.
ಈ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅಪ್ರಾಪ್ತರ ಕೈಗೆ ವಾಹನ ನೀಡಿರುವುದು ಗಂಭೀರ ನಿರ್ಲಕ್ಷ್ಯ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಮಕ್ಕಳ ಸುರಕ್ಷತೆ ಕಡೆಗಣಿಸಿದ ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.
ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

