ಫೇಕ್ UPIಗೆ ಬ್ರೇಕ್: ಬಿಎಂಟಿಸಿ ಹೊಸ ಸ್ಮಾರ್ಟ್ ಇಟಿಎಂ ಲಾಂಚ್

ಬೆಂಗಳೂರು: ನಗರದ ಸಾರ್ವಜನಿಕ ಸಾರಿಗೆಗೆ ಜೀವನಾಡಿಯಾಗಿರುವ ಬಿಎಂಟಿಸಿ ಇದೀಗ ಟಿಕೆಟ್ ವಂಚನೆಗೆ ಕಡಿವಾಣ ಹಾಕಲು ಮಹತ್ವದ ಹೆಜ್ಜೆ ಇಟ್ಟಿದೆ. ಬಸ್‌ಗಳಲ್ಲಿ ಹೊಸ ಡೈನಾಮಿಕ್ ಕ್ಯೂಆರ್ ಕೋಡ್ ಆಧಾರಿತ ಇಟಿಎಂ (ETM) ಮಷೀನ್‌ಗಳನ್ನು ಪರಿಚಯಿಸಲು ಮುಂದಾಗಿದ್ದು, ಮುಂದಿನ ತಿಂಗಳಾಂತ್ಯಕ್ಕೆ ಎಲ್ಲಾ ಬಸ್‌ಗಳಲ್ಲಿ ಜಾರಿಗೆ ಬರಲಿದೆ. ಇತ್ತೀಚೆಗೆ ಬಿಎಂಟಿಸಿ ಬಸ್‌ಗಳಲ್ಲಿ ಕಂಡೆಕ್ಟರ್‌ಗಳು ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್ ಬಳಸಿಕೊಂಡು ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್ ನೀಡದೆ ವಂಚನೆ ಮಾಡಿದ ಘಟನೆಗಳು ಬೆಳಕಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಇಂತಹ ಕಳ್ಳಾಟಕ್ಕೆ ಬ್ರೇಕ್ ಹಾಕಲು ಬಿಎಂಟಿಸಿ ಹೊಸ ತಂತ್ರಜ್ಞಾನವನ್ನು ಅಳವಡಿಸುತ್ತಿದೆ.

ಸುಮಾರು 11 ಸಾವಿರ ಅತ್ಯಾಧುನಿಕ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಮಷೀನ್‌ಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಗಾಗಿ ಸುಮಾರು 40 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಮುಂಬೈ ಮೂಲದ ‘Chalo’ ಕಂಪನಿಗೆ ಟೆಂಡರ್ ನೀಡಲಾಗಿದೆ.

ಈಗಾಗಲೇ ಸುಮಾರು 400 ಇಟಿಎಂ ಮಷೀನ್‌ಗಳ ಪೈಲೆಟ್ ಟ್ರಯಲ್ ಯಶಸ್ವಿಯಾಗಿ ನಡೆಯುತ್ತಿದೆ. ಯಶವಂತಪುರ ಡಿಪೋ ಸೇರಿದಂತೆ 10ಕ್ಕೂ ಹೆಚ್ಚು ಮಾರ್ಗಗಳಲ್ಲಿ ಪರೀಕ್ಷಾ ಕಾರ್ಯ ನಡೆಯುತ್ತಿದ್ದು, ಸಣ್ಣಪುಟ್ಟ ತೊಂದರೆಗಳನ್ನು ಸರಿಪಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ.

Leave a Reply

Your email address will not be published. Required fields are marked *