
ಬಿರು ಬೇಸಿಗೆಯ ನಡುವೆಯೂ ಭಕ್ತಿಭಾವ ಕಡಿಮೆಯಾಗಿಲ್ಲ. ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರ ದಂಡು ನಿರಂತರವಾಗಿ ಹರಿದು ಬರುತ್ತಿದೆ.
ಏಪ್ರಿಲ್ ತಿಂಗಳ ಮೊದಲ 22 ದಿನಗಳಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು 3.25 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿರುವುದು ಗಮನಾರ್ಹವಾಗಿದೆ.
ಈ ಕಾಣಿಕೆಯಲ್ಲಿ ₹3,15,62,354 ನಗದು, ₹10,34,500 ನಾಣ್ಯಗಳು ಸೇರಿದ್ದು, ಜೊತೆಗೆ 47 ಗ್ರಾಂ ಚಿನ್ನ ಹಾಗೂ 592 ಗ್ರಾಂ ಬೆಳ್ಳಿ ಕೂಡ ಭಕ್ತರಿಂದ ಸಮರ್ಪಿಸಲಾಗಿದೆ.
ಶಾಲಾ-ಕಾಲೇಜು ರಜೆ ಹಿನ್ನೆಲೆ ಕುಟುಂಬ ಸಮೇತರಾಗಿ ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದು, ಬಿಸಿಲಿನ ತೀವ್ರತೆ ಇದ್ದರೂ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ಸಿಬ್ಬಂದಿ, ಭಜನಾ ಮಂಡಳಿಗಳು ಮತ್ತು ಕರಸೇವಕರು ಭಾಗವಹಿಸಿದ್ದು, ವ್ಯವಸ್ಥಿತವಾಗಿ ಕಾರ್ಯ ಪೂರ್ಣಗೊಳಿಸಲಾಗಿದೆ.

