
ಒಂದು ನಗರ, ಪಟ್ಟಣ ಅಥವಾ ಗ್ರಾಮದ ಅಭಿವೃದ್ಧಿಯನ್ನು ಅಲ್ಲಿನ ಭವ್ಯ ಕಟ್ಟಡಗಳಿಂದ ಅಳೆಯಲಾಗುವುದಿಲ್ಲ. ಬದಲಾಗಿ, ಅಲ್ಲಿನ ಸಾಮಾನ್ಯ ಜನರಿಗೆ ಸಿಗುವ ನಾಗರಿಕ ಸೌಲಭ್ಯಗಳು ಆ ನಗರದ ಗುಣಮಟ್ಟ ಮತ್ತು ಆಡಳಿತದ ದಕ್ಷತೆಯನ್ನು ಪ್ರತಿಬಿಂಬಿಸುತ್ತವೆ. “ಜನರಿಂದ, ಜನರಿಗಾಗಿ, ಜನರಿಗೋಸ್ಕರ” ಇರುವ ಸರ್ಕಾರವು ನೀಡುವ ಸೌಲಭ್ಯಗಳು ಎಷ್ಟು ಸುಸ್ಥಿರವಾಗಿವೆ ಎಂಬುದು ಇಂದಿನ ದೊಡ್ಡ ಪ್ರಶ್ನೆ.
ಫುಟ್‌ಪಾತ್: ನಡೆಯುವ ಹಕ್ಕು ಅಡವಿಡಲಾಗಿದೆಯೇ?
ನಗರದ ನಾಗರಿಕರಿಗೆ ಸುರಕ್ಷಿತವಾಗಿ ನಡೆಯಲು ಇರುವ ಹಾದಿಯೇ ‘ಫುಟ್‌ಪಾತ್’. ಒಬ್ಬ ವ್ಯಕ್ತಿ ಯಾವುದೇ ಆತಂಕವಿಲ್ಲದೆ, ಗಾಯದ ಭಯವಿಲ್ಲದೆ ನಡೆಯುವುದು ಅವನ ಮೂಲಭೂತ ಹಕ್ಕು. ಆದರೆ, ಭಾರತದ ನಗರಗಳಲ್ಲಿ ಫುಟ್‌ಪಾತ್‌ಗಳ ಸ್ಥಿತಿ ಹೇಗಿದೆ? ಎತ್ತರ-ಅಗಲಗಳ ಅಸಮತೋಲನ, ಅರ್ಧಕ್ಕೆ ನಿಂತ ಕಾಮಗಾರಿಗಳು ಪಾದಚಾರಿಗಳ ಪಾಲಿಗೆ ಮೃತ್ಯುಪಾಶಗಳಂತಾಗಿವೆ.
ಅತಿಕ್ರಮಣ ಮತ್ತು ಬದುಕಿನ ಹೋರಾಟ
ಫುಟ್‌ಪಾತ್‌ಗಳ ಮೇಲೆ ಬೀದಿ ಬದಿ ವ್ಯಾಪಾರಿಗಳ ಅತಿಕ್ರಮಣ ಇಂದು ದೊಡ್ಡ ಸಮಸ್ಯೆಯಾಗಿದೆ. ಒಂದೆಡೆ ತೆರಿಗೆ ಪಾವತಿಸುವ ಮಳಿಗೆದಾರರು ತಮ್ಮ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ ಎನ್ನುತ್ತಾರೆ, ಇನ್ನೊಂದೆಡೆ ಸಾಮಾನ್ಯ ನಾಗರಿಕರು ನೆಮ್ಮದಿಯಾಗಿ ನಡೆಯಲು ಜಾಗವಿಲ್ಲ ಎನ್ನುತ್ತಾರೆ. ಆದರೆ, ಈ ವ್ಯಾಪಾರಿಗಳಿಗೂ ಬದುಕುವ ಹಕ್ಕಿಲ್ಲವೇ? ಜನರಿಗೆ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಒದಗಿಸುವ ಈ ವ್ಯವಸ್ಥೆಯೂ ನಗರದ ಒಂದು ಭಾಗವೇ ಅಲ್ಲವೇ? ಈ ಎರಡರ ನಡುವಿನ ಸಮತೋಲನ ಕಾಯ್ದುಕೊಳ್ಳುವಲ್ಲಿ ನಮ್ಮ ನಗರ ಯೋಜನೆಗಳು ವಿಫಲವಾಗಿವೆ.
ರಸ್ತೆಗಳ ರೇಸ್ ಮತ್ತು ಪಾದಚಾರಿಗಳ ಗೋಳು
ವಾಹನ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನ ಸವಾರರು ಫುಟ್‌ಪಾತ್‌ಗಳನ್ನು ರಸ್ತೆಯಂತೆ ಬಳಸುತ್ತಿರುವುದು ಪಾದಚಾರಿಗಳ ಸುರಕ್ಷತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಇನ್ನು ರಸ್ತೆಗಳ ಕಥೆಯಂತೂ ಹೇಳತೀರದು. ತೆರಿಗೆದಾರರು ಪ್ರತಿದಿನ ಗುಂಡಿಬಿದ್ದ ರಸ್ತೆಗಳಲ್ಲಿ ಸರ್ಕಸ್ ಮಾಡಬೇಕಾದ ಪರಿಸ್ಥಿತಿ ಇದೆ. ರಸ್ತೆಗಳಲ್ಲಿರುವುದು ಮಳೆನೀರು ತುಂಬಿದ ಗುಂಡಿಗಳೋ ಅಥವಾ ಆ ರಸ್ತೆ ನಿರ್ಮಿಸಿದವರ ‘ಬುದ್ಧಿಹೀನತೆಯ’ ಗುಂಡಿಗಳೋ ಎಂಬುದು ತಿಳಿಯದಾಗಿದೆ.
ಜವಾಬ್ದಾರಿ ಯಾರದ್ದು?
ಸುಸ್ಥಿರ ಜೀವನ ನಿರ್ಮಿಸಲು ಎಷ್ಟೋ ದೊಡ್ಡ ಮೆದುಳುಗಳು (Great Minds) ಒಂದಾಗಿ ಯೋಜನೆ ರೂಪಿಸುತ್ತವೆ. ಆದರೂ ಸಾಮಾನ್ಯ ಜನರು ಇಂದಿಗೂ ಸಣ್ಣ ಪುಟ್ಟ ಸೌಲಭ್ಯಗಳಿಗೂ ಯಾಕೆ ಪರದಾಡುತ್ತಿದ್ದಾರೆ? ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತದ ನಾಗರಿಕರು ಈ ನೋವಿಗೆ ಕಾರಣವೇ? ಅಥವಾ ತಾವು ನಂಬಿ ಅಧಿಕಾರ ನೀಡಿದ ವ್ಯಕ್ತಿಗಳ ಮೇಲೆ ಇಟ್ಟ ಅತಿ ಹೆಚ್ಚಿನ ವಿಶ್ವಾಸವೇ ಅವರನ್ನು ಈ ಸ್ಥಿತಿಗೆ ತಂದಿದೆಯೇ?
ಉಪಸಂಹಾರ
ನಾಗರಿಕ ಮೂಲಸೌಕರ್ಯ ಎನ್ನುವುದು ಕೇವಲ ಕಲ್ಲು-ಸಿಮೆಂಟ್‌ನ ಕೆಲಸವಲ್ಲ, ಅದು ಜನರ ಜೀವನದ ಮೌಲ್ಯ. ರಸ್ತೆ ಮತ್ತು ಫುಟ್‌ಪಾತ್‌ಗಳು ಸುಸ್ಥಿತಿಯಲ್ಲಿದ್ದರೆ ಮಾತ್ರ ಆ ನಗರದ ಆಡಳಿತಕ್ಕೆ ಗೌರವ ಸಿಗುತ್ತದೆ. ನಾವು ಕೇವಲ ತೆರಿಗೆ ಪಾವತಿಸಿದರೆ ಸಾಲದು, ನಮಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳಿಗಾಗಿ ಪ್ರಶ್ನಿಸುವ ಗುಣವನ್ನೂ ಬೆಳೆಸಿಕೊಳ್ಳಬೇಕಿದೆ.

