
ಭಾರತೀಯ ಕ್ರಿಕೆಟ್ ಹಬ್ಬ ಐಪಿಎಲ್ (IPL 2026) ಸಂಭ್ರಮದ ನಡುವೆಯೇ ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಐಪಿಎಲ್ ಪಂದ್ಯಗಳ ನೇರಪ್ರಸಾರದಲ್ಲಿ ತಾಂತ್ರಿಕ ತಂಡದ ಭಾಗವಾಗಿದ್ದ ಬ್ರಿಟಿಷ್ ಪ್ರಜೆಯೊಬ್ಬರು ಮುಂಬೈನ ದಕ್ಷಿಣ ಭಾಗದ ಪ್ರಸಿದ್ಧ ಹೋಟೆಲ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯು ಕ್ರಿಕೆಟ್ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಮುಂಬೈ ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.
ಮೃತರನ್ನು 76 ವರ್ಷದ ಬ್ರಿಟಿಷ್ ಪ್ರಜೆ ಜಾನ್ ವಿಲಿಯಂ ಲ್ಯಾಂಗ್‌ಫೋರ್ಡ್ (Jan William Langford) ಎಂದು ಗುರುತಿಸಲಾಗಿದೆ. ಇವರು ಬಿಸಿಸಿಐ (BCCI) ಪರವಾಗಿ ಐಪಿಎಲ್ ಪಂದ್ಯಗಳ ನೇರಪ್ರಸಾರಕ್ಕಾಗಿ ಬ್ರಾಡ್‌ಕಾಸ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮಾರ್ಚ್ 24 ರಿಂದ ಇವರು ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ಪ್ರಸಿದ್ಧ ‘ಟ್ರೈಡೆಂಟ್ ಹೋಟೆಲ್’ನಲ್ಲಿ ವಾಸ್ತವ್ಯ ಹೂಡಿದ್ದರು.
ವರದಿಗಳ ಪ್ರಕಾರ, ಸೋಮವಾರ (ಮಾರ್ಚ್ 30) ಬೆಳಗ್ಗೆ ಹೋಟೆಲ್ ಸಿಬ್ಬಂದಿ ಜಾನ್ ಅವರ ಕೋಣೆಯ ಬಾಗಿಲು ತಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಮಾಸ್ಟರ್ ಕೀ ಬಳಸಿ ಕೋಣೆಯನ್ನು ತೆರೆದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಅವರನ್ನು ಹೋಟೆಲ್ ವೈದ್ಯರು ಪರೀಕ್ಷಿಸಿ, ನಂತರ ಬಾಂಬೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಪೊಲೀಸ್ ತನಿಖೆ ಮತ್ತು ವರದಿ:
ಮುಂಬೈನ ಮೆರೀನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಅಸ್ವಾಭಾವಿಕ ಸಾವು (Accidental Death Report – ADR) ಎಂದು ಪ್ರಕರಣ ದಾಖಲಾಗಿದೆ. ಜಾನ್ ಅವರು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದ ನಂತರ ಹೋಟೆಲ್‌ಗೆ ಮರಳಿದ್ದರು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಸಂಶಯಾಸ್ಪದ ಅಂಶಗಳು ಕಂಡುಬಂದಿಲ್ಲ. ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ವಯೋಸಹಜ ಕಾರಣ ಅಥವಾ ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಐಪಿಎಲ್ ಅದ್ದೂರಿಯಾಗಿ ನಡೆಯುತ್ತಿರುವ ಸಂದರ್ಭದಲ್ಲೇ ತಾಂತ್ರಿಕ ತಂಡದ ಹಿರಿಯ ಸದಸ್ಯರೊಬ್ಬರ ಸಾವು ತಂಡದ ಇತರ ಸದಸ್ಯರಲ್ಲಿ ವಿಷಾದ ಮೂಡಿಸಿದೆ. ಈ ಹಿಂದೆ 2020ರಲ್ಲಿ ದೀನ್ ಜೋನ್ಸ್ ಅವರೂ ಸಹ ಮುಂಬೈ ಹೋಟೆಲ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಜಾನ್ ವಿಲಿಯಂ ಅವರ ಸಾವಿನ ಬಗ್ಗೆ ಬ್ರಿಟಿಷ್ ರಾಯಭಾರ ಕಚೇರಿಗೂ ಮಾಹಿತಿ ನೀಡಲಾಗಿದ್ದು, ಅವರ ಕುಟುಂಬದವರನ್ನು ಸಂಪರ್ಕಿಸುವ ಪ್ರಕ್ರಿಯೆ ನಡೆಯುತ್ತಿದೆ.
Source credit:”udayavaani”

