

ಬೆಂಗಳೂರು: ಇಷ್ಟು ವರ್ಷಗಳಿಂದ ನಾಪತ್ತೆಯಾಗಿದ್ದ ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಇದೀಗ ಸಾರ್ವಜನಿಕವಾಗಿ ಪ್ರತ್ಯಕ್ಷವಾಗಿ, ತಮ್ಮ ಜೀವನದ ಸಂಕಷ್ಟಕರ ಅಧ್ಯಾಯವನ್ನು ಹಂಚಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ್, ತಮ್ಮ ನಾಪತ್ತೆಯ ಹಿಂದಿನ ಕಾರಣಗಳನ್ನು ವಿವರಿಸುತ್ತಾ, ‘ನನ್ನಿಂದ ಹಲವರಿಗೆ ತೊಂದರೆ ಆಗಿದೆ. ಎಲ್ಲರಿಗೂ ಕ್ಷಮೆ ಕೇಳುತ್ತೇನೆ’ ಎಂದು ಮಾತು ಆರಂಭಿಸಿದರು.
ಇಂಜಿನಿಯರಿಂಗ್ ಮುಗಿಸಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿದ ಅವರು ನಂತರ ದರ್ಶನ್ ಅವರ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದಾಗಿ ಹೇಳಿದರು. ಸಿನಿಮಾ ನಿರ್ಮಾಣ, ಡಿಸ್ಟ್ರಿಬ್ಯೂಷನ್ ಮತ್ತು ಹೋಟೆಲ್ ವ್ಯವಹಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೈಹಾಕಿದರೂ ಯಾವುದೇ ಪ್ರಯತ್ನ ಯಶಸ್ವಿಯಾಗಲಿಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆ ಭಾರೀ ಸಾಲದ ಹೊರೆ ಹೊತ್ತ ಅವರು, ಮಾನಸಿಕವಾಗಿ ಕುಗ್ಗಿ ಜೀವತ್ಯಾಗ ಮಾಡುವ ಮಟ್ಟಕ್ಕೂ ತಲುಪಿದ್ದರು. ಆದರೆ ಆ ನಿರ್ಧಾರದಿಂದ ಹಿಂದೆ ಸರಿದು, ಕುಂದಾಪುರದಿಂದ ಹೊರಟು ದೇಶದ ವಿವಿಧ ಭಾಗಗಳಲ್ಲಿ ಅಲೆದಾಡಿದರು. ಕೊಲ್ಲಾಪುರ, ಸೊಲ್ಲಾಪುರ ಸೇರಿದಂತೆ ಉತ್ತರ ಭಾರತದ ಹಲವು ನಗರಗಳಲ್ಲಿ ತಾತ್ಕಾಲಿಕ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸಿದರು.
ನೇಪಾಳದಲ್ಲಿಯೂ ಕೆಲ ಕಾಲ ವಾಸವಾಗಿದ್ದ ಮಲ್ಲಿಕಾರ್ಜುನ್, ತಮ್ಮ ಬದುಕಿರುವ ವಿಚಾರವನ್ನು ಕುಟುಂಬಕ್ಕೆ ಪತ್ರದ ಮೂಲಕ ತಿಳಿಸಿದ್ದಾಗಿ ಹೇಳಿದ್ದಾರೆ. ‘ತಂದೆ-ತಾಯಿ ಅಗಲಿದಾಗ ಅಂತಿಮ ದರ್ಶನಕ್ಕೂ ಹೋಗಲಿಲ್ಲ. ಅದು ಇಂದಿಗೂ ನೋವಾಗುತ್ತದೆ’ ಎಂದು ಅವರು ಭಾವುಕರಾದರು.
ಇನ್ನೂ, ಕಳೆದ ವರ್ಷ ದರ್ಶನ್ ಸಹೋದರ ದಿನಕರ್ ಅವರನ್ನು ಭೇಟಿ ಮಾಡಿದ ಅವರು, ದರ್ಶನ್ ಅವರನ್ನು ಭೇಟಿ ಮಾಡುವ ಯೋಜನೆ ಇಟ್ಟಿದ್ದಾಗ ಪ್ಯಾರಲಿಸಿಸ್ ಸಮಸ್ಯೆ ಎದುರಾಗಿ 7 ತಿಂಗಳು ವಿಶ್ರಾಂತಿ ಪಡೆಯಬೇಕಾಯಿತು ಎಂದು ವಿವರಿಸಿದರು.
ಸಾಲಬಾಧೆ ಕುರಿತು ಮಾತನಾಡಿದ ಅವರು, ‘ನಾನು ಸಂಕಷ್ಟದಲ್ಲಿದ್ದಾಗ ದರ್ಶನ್ ಬಳಿ 1 ಕೋಟಿ ರೂಪಾಯಿ ಸಹಾಯ ಕೇಳಿದೆ. ಅವರು ಸಹಾಯ ಮಾಡಿದ್ದಾರೆ. ಆದರೆ ಮತ್ತೆ ಹಣ ಕೇಳಲು ಮನಸ್ಸಾಗಲಿಲ್ಲ’ ಎಂದು ಹೇಳಿದ್ದಾರೆ.
‘ನಾನು ಎಲ್ಲಿದ್ದೇನೆ ಎಂಬುದು ದರ್ಶನ್ ಅವರಿಗೆ ಗೊತ್ತಿರಲಿಲ್ಲ. ನಾನು ಯಾರನ್ನೂ ಮೋಸ ಮಾಡಿಲ್ಲ. ಅವರ ಮೇಲಿನ ಗೌರವದಿಂದಲೇ ಅವರನ್ನು ಎದುರಿಸಲು ಹೆದರಿದೆ, ಅದಕ್ಕಾಗಿಯೇ ಊರು ಬಿಟ್ಟೆ’ ಎಂದು ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದ್ದಾರೆ.

