
ಗದಗ: ಜೈಲಿನಿಂದ ಹೊರಬಂದ ಬಳಿಕ ಸೇಡು ತೀರಿಸಿಕೊಳ್ಳಲು ಅದೇ ಬಾಲಕಿ ಮೇಲೆ ಮತ್ತೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
17 ವರ್ಷ 5 ತಿಂಗಳ ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿ ಅತ್ಯಾಚಾರ ನಡೆಸಿದ ಆರೋಪ ಅಲ್ಲಾಭಕ್ಷಿ ಕೊಪ್ಪದ ಎಂಬಾತನ ಮೇಲಿದೆ. ಈ ಕೃತ್ಯಕ್ಕೆ ಆತನ ಸ್ನೇಹಿತ ಆಸೀಫ್ ನದಫ್ ಸಹಕಾರ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಮೇ 23ರಂದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಂಪ್ಯೂಟರ್ ಕ್ಲಾಸ್‌ಗೆ ತೆರಳುತ್ತಿದ್ದ ಬಾಲಕಿಯನ್ನು ಆರೋಪಿಗಳು ಪೋಸ್ಟ್ ಆಫೀಸ್ ಬಳಿ ತಡೆದಿದ್ದಾರೆ. “ನಿನ್ನ ಅಣ್ಣ ಕರೆಯುತ್ತಿದ್ದಾನೆ” ಎಂದು ನಂಬಿಸಿ, ಬಲವಂತವಾಗಿ ಗೂಡ್ಸ್ ವಾಹನದಲ್ಲಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ನಂತರ ಪಟ್ಟಣ ಹೊರವಲಯದ ಜಮೀನೊಂದಕ್ಕೆ ಕರೆದೊಯ್ದು ಅಲ್ಲಾಭಕ್ಷಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಅಲ್ಲಾಭಕ್ಷಿ ವಿರುದ್ಧ ಇದೇ ಬಾಲಕಿ ಈ ಹಿಂದೆ 2025ರಲ್ಲಿ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದಳು. ಆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ, ಬಿಡುಗಡೆಯಾದ ಬಳಿಕ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮತ್ತೆ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಸಂತ್ರಸ್ತೆ ಕುಟುಂಬದ ದೂರಿನ ಮೇರೆಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

