ಚಿಕ್ಕಬಾಣಾವರ ದುರಂತ: ಆಟವಾಡುತ್ತಿದ್ದ ಮಕ್ಕಳ ಮೇಲೆ ಗೇಟ್ ಬಿದ್ದು ಮಗು ಮೃತ

ಬೆಂಗಳೂರು: ಆಟವಾಡುತ್ತಿದ್ದ ಮಕ್ಕಳ ಗುಂಪಿನ ಮೇಲೆ ಕಾಂಪೌಂಡ್ ಗೇಟ್ ಬಿದ್ದು 5 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬಾಣಾವರ ದ್ವಾರಕಾನಗರದಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಗೌಸಿಯಾ (5) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಅಣ್ಣ ಇಮಾಮ್ ಮತ್ತು ತಂಗಿ ಶಕಿಲಾ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ 3 ವರ್ಷದ ಮಗು ಸುಮಯ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಇಮಾಮ್ ರಮೀಜಾ ದಂಪತಿಯ ಮಕ್ಕಳಾದ ಗೌಸಿಯಾ, ಇಮಾಮ್ ಹಾಗೂ ಶಕಿಲಾ ಕಳೆದ 5 ತಿಂಗಳ ಹಿಂದೆ ಬಾಡಿಗೆ ಮನೆಗೆ ಬಂದಿದ್ದರು. ಕುಟುಂಬವು ಬಸ್ ನಿಲ್ದಾಣದ ಬಳಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿತ್ತು.

ಮಕ್ಕಳು ಮನೆಯ ಬಳಿ ಆಟವಾಡುತ್ತಿದ್ದ ವೇಳೆ ಅಚಾನಕ್ ಆಗಿ ಕಾಂಪೌಂಡ್ ಗೇಟ್ ಕುಸಿದು ಬಿದ್ದಿದೆ. ಈ ವೇಳೆ ಗೌಸಿಯಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.

ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಚಿಕ್ಕಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *