
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪಚ್ಚರಮಾಕಲಹಳ್ಳಿ ಬಳಿ ಕೆರೆಯಲ್ಲಿ ಈಜಲು ಹೋದ ಅಣ್ಣ-ತಮ್ಮ ಇಬ್ಬರು ಯುವಕರು ನೀರುಪಾಲಾಗಿ ದುರ್ಮರಣ ಹೊಂದಿರುವ ಘಟನೆ ನಡೆದಿದೆ.
ಮೃತರನ್ನು ರೋಣೂರು ಹೋಬಳಿ ವ್ಯಾಪ್ತಿಯ ಚಾಂಪಲ್ಲಿ ಗ್ರಾಮದ ನರೇಂದ್ರ (25) ಹಾಗೂ ಚಂದನ್ (23) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಇಬ್ಬರೂ ಗಾರೆ ಕೆಲಸಕ್ಕೆ ಪಚ್ಚರಮಾಕಲಹಳ್ಳಿಗೆ ಬಂದಿದ್ದರು. ಮಧ್ಯಾಹ್ನದ ತೀವ್ರ ಬಿಸಿಲಿನ ತಾಪಮಾನದಿಂದ ತಂಪಿಗಾಗಿ ಸಮೀಪದ ಕೆರೆಯಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ಕೆರೆಯ ಆಳ ಅಂದಾಜಿಸಲು ಸಾಧ್ಯವಾಗದೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರು ಕಣ್ಣೀರು ಹಾಕಿದ್ದಾರೆ.
ಈ ಘಟನೆ ರಾಯಲ್ಪಾಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ, ಹಿರಿಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

