
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದ ವಿಚಿತ್ರ ಕಳ್ಳತನ ಪ್ರಕರಣವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಿಯಕರನ ಜೊತೆ ಓಡಿಹೋಗಲು ಪ್ಲ್ಯಾನ್ ಮಾಡಿದ್ದ ಪತ್ನಿಯೊಬ್ಬಳು ಗಂಡನ ಮನೆಯಲ್ಲೇ 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಬಂಧಿತರನ್ನು ಹಣಮಂತ ಮಾರಾಪೂರ ಹಾಗೂ ಹಸೀನಾ ನದಾಫ್ ಎಂದು ಗುರುತಿಸಲಾಗಿದೆ. ಹಸೀನಾ ಮದುವೆಯಾದ ಬಳಿಕವೂ ತನ್ನ ಪ್ರಿಯಕರನ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ. ಕೊನೆಗೆ ಪ್ರಿಯಕರನ ಜೊತೆ ಜೀವನ ಸಾಗಿಸಲು ನಿರ್ಧರಿಸಿದ್ದ ಆಕೆ ಗಂಡನ ಮನೆಯಲ್ಲಿದ್ದ 154.6 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾಳೆ.
ಈ ಸಂಬಂಧ ದಿಲ್ಶಾನ್ ನದಾಫ್ ಕಟಕೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇವಲ 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ, 45 ಗ್ರಾಂ ಬೆಳ್ಳಿಯ ಆಭರಣವನ್ನು ವಶಕ್ಕೆ ಪಡೆದಿದ್ದಾರೆ.
ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ಹಾಗೂ ಪಿಎಸ್ಐ ಬಸವರಾಜ್ ಕೊಣ್ಣೂರೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪೊಲೀಸರ ವೇಗದ ಕಾರ್ಯಾಚರಣೆಗೆ ಎಸ್ಪಿ ಕೆ ರಾಮರಾಜನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

