
ಬೆಂಗಳೂರು ನಗರದಲ್ಲಿ ಬೆಚ್ಚಿಬೀಳಿಸುವಂತಹ ಸಿನಿಮೀಯ ಕ್ರೈಂ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಣ ಮತ್ತು ಚಿನ್ನಾಭರಣ ದೋಚುವ ಉದ್ದೇಶದಿಂದ ಒಂಟಿ ಮಹಿಳೆಯನ್ನು ಉದ್ದೇಶಪೂರ್ವಕವಾಗಿ ಅಪಘಾತಕ್ಕೀಡು ಮಾಡಿ ಕೊಲೆ ಮಾಡಿರುವ ಪ್ರಕರಣವನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇದಿಸಿದ್ದಾರೆ.
ಏಪ್ರಿಲ್ 21ರಂದು ಕುರುಬರಹಳ್ಳಿಯ ಪೈಪ್ ಲೇನ್ ರಸ್ತೆಯಲ್ಲಿ ವಿಜಯಲಕ್ಷ್ಮಿ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದ ವೇಳೆ ರಾಕೇಶ್ ಎಂಬಾತ ಬೈಕ್‌ನಿಂದ ಡಿಕ್ಕಿ ಹೊಡೆದಿದ್ದಾನೆ. ಅಪಘಾತ ಸಂಭವಿಸಿದ ತಕ್ಷಣವೇ ಇತರ ಆರೋಪಿಗಳು ಸ್ಥಳಕ್ಕೆ ಬಂದು ರಕ್ಷಕರಂತೆ ನಟಿಸಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಆದರೆ ಇದೇ ವೇಳೆ ಮಹಿಳೆಯ ಪರ್ಸ್‌ನಲ್ಲಿದ್ದ ಮನೆ ಕೀಲಿಯನ್ನು ಕಳವು ಮಾಡಿದ್ದ ಆರೋಪಿಗಳು, ಅವರ ಮನೆಗೆ ತೆರಳಿ ಹಣ ಮತ್ತು ಚಿನ್ನಾಭರಣ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರಿಂದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ಇನ್ನೊಂದೆಡೆ ಅಪಘಾತಕ್ಕೆ ಸಂಬಂಧಿಸಿದಂತೆ ರಾಕೇಶ್ ಸಂಚಾರ ಪೊಲೀಸ್ ಠಾಣೆಗೆ ತೆರಳಿ, ‘ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ, ನಾನು ಆಸ್ಪತ್ರೆಗೆ ಸೇರಿಸಿದ್ದೇನೆ’ ಎಂದು ಸುಳ್ಳು ದೂರು ನೀಡಿ ಪೊಲೀಸರ ಗಮನ ಬೇರೆಡೆ ತಿರುಗಿಸಲು ಯತ್ನಿಸಿದ್ದ.
ಮಹಿಳೆಯ ಮನೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದ ಬಗ್ಗೆ ಬಂದ ದೂರಿನ ಆಧಾರದಲ್ಲಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಪಘಾತದ ಹಿಂದೆ ನಡೆದಿದ್ದ ಕೊಲೆ ಸಂಚು ಬಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ್, ಚೇತನ್, ಮಂಜುನಾಥ್, ಪ್ರದೀಪ್ ಮತ್ತು ಯೋಹಾನ್ ಎಂಬ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಪೈಕಿ ಮಂಜುನಾಥ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.
ಸದ್ಯ ಪೊಲೀಸರು ಕೊಲೆ, ಸುಲಿಗೆ ಮತ್ತು ಕಳ್ಳತನ ಯತ್ನ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

