ಹರಿಹರ ಪಂಚಮಸಾಲಿ ಪೀಠದಲ್ಲಿ ನಿಷೇಧಾಜ್ಞೆ: ಸಭೆ, ಸಮಾರಂಭಕ್ಕೆ ಜಿಲ್ಲಾಡಳಿತ ಬ್ರೇಕ್

ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ದಿನದಿಂದ ದಿನಕ್ಕೆ ಸ್ವಾಮೀಜಿ ಬೆಂಬಲಿಗರು ಹಾಗೂ ಟ್ರಸ್ಟಿಗಳ ನಡುವಿನ ಸಂಘರ್ಷ ತೀವ್ರವಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಮಠದ ಆವರಣದಲ್ಲಿ ಯಾವುದೇ ಸಭೆ, ಸಮಾರಂಭ, ಸುದ್ದಿಗೋಷ್ಠಿ ನಡೆಸಬಾರದು ಎಂದು ಮೇ 1ರಿಂದ 30ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ವಚನಾನಂದ ಸ್ವಾಮೀಜಿ ಬೆಂಬಲಿಗರು ಹಾಗೂ ಟ್ರಸ್ಟಿಗಳ ನಡುವೆ ಕಳೆದ ಕೆಲವು ವಾರಗಳಿಂದ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿವೆ.

ಮಠದಲ್ಲಿ ಮಾರ್ಚ್ 10ರಿಂದ ವಿವಿಧ ಗುಂಪುಗಳಿಂದ ನಿರಂತರ ಸಭೆಗಳು, ಸುದ್ದಿಗೋಷ್ಠಿಗಳು ನಡೆಯುತ್ತಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಪ್ರಚೋದನಕಾರಿ ಹೇಳಿಕೆಗಳಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಭೀತಿ ವ್ಯಕ್ತವಾಗಿದೆ.

ಈ ಹಿನ್ನೆಲೆ ಪೊಲೀಸ್ ಇಲಾಖೆ ಪದೇ ಪದೇ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಗಾಗಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಇಂದು ಸ್ವಾಮೀಜಿ ಬೆಂಬಲಿಗರು “ಲೆಕ್ಕ ಕೊಡಿ” ಅಭಿಯಾನ ಹಮ್ಮಿಕೊಂಡು ಟ್ರಸ್ಟಿಗಳ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು. ಏಪ್ರಿಲ್ 27ರಂದು ಟ್ರಸ್ಟಿಗಳು ನೀಡಿದ ಲೆಕ್ಕಪತ್ರ ಸುಳ್ಳು ಎಂದು ಆರೋಪಿಸಿದ ಬೆಂಬಲಿಗರು, ಪಾರದರ್ಶಕ ಲೆಕ್ಕ ಮಂಡನೆಗೆ ಆಗ್ರಹಿಸಿದರು.

ಅಷ್ಟೇ ಅಲ್ಲದೆ, ಹಳ್ಳಿ ಹಳ್ಳಿಗೆ ತೆರಳಿ ಭಕ್ತರು ನೀಡಿದ ಕಾಣಿಕೆಗಳ ಪಟ್ಟಿ ಸಿದ್ಧಪಡಿಸುವುದಾಗಿ ಸ್ವಾಮೀಜಿ ಬೆಂಬಲಿಗರು ಘೋಷಿಸಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಭೆ ನಡೆಸಲು ಕೆಲವರು ಯತ್ನಿಸಿರುವ ಮಾಹಿತಿ ಕೂಡ ಲಭ್ಯವಾಗಿದೆ.

Leave a Reply

Your email address will not be published. Required fields are marked *