
ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಜಯ ಸಾಧಿಸಿದ್ದಾರೆ. ಮಾಜಿ ಸಚಿವ ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ.
ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಉಮೇಶ್ ಮೇಟಿ, ಬಿಜೆಪಿಯ ಹಿರಿಯ ಅಭ್ಯರ್ಥಿ ವೀರಣ್ಣ ಚರಂತಿಮಠರನ್ನು ಸೋಲಿಸಿ ಗಮನ ಸೆಳೆದಿದ್ದಾರೆ. ಅಂತಿಮ ಫಲಿತಾಂಶದ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ 97,941 ಮತಗಳು ಚಲಾವಣೆ ಆಗಿದ್ದು, ಬಿಜೆಪಿಯ ವೀರಣ್ಣ ಚರಂತಿಮಠರಿಗೆ 76,075 ಮತಗಳು ಮಾತ್ರ ಲಭಿಸಿವೆ. ಹೀಗಾಗಿ 21,866 ಮತಗಳ ಭಾರೀ ಅಂತರದಿಂದ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಈ ಗೆಲುವು ಬಾಗಲಕೋಟೆ ಕ್ಷೇತ್ರದಲ್ಲಿ ಹೊಸ ದಾಖಲೆ ಕೂಡ ನಿರ್ಮಿಸಿದೆ. ಈವರೆಗೆ ನಡೆದ ಚುನಾವಣಗಳಲ್ಲಿ ಕಂಡಿದ್ದ ಅತಿದೊಡ್ಡ ಗೆಲುವಿನ ಅಂತರವನ್ನು ಮುರಿದು ಉಮೇಶ್ ಮೇಟಿ ಹೊಸ ದಾಖಲೆ ಬರೆದಿದ್ದಾರೆ.
ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಕುಟುಂಬ ಸದಸ್ಯರು ಭಾವುಕರಾಗಿ ಸಂತಸ ಹಂಚಿಕೊಂಡಿದ್ದಾರೆ. ಈ ಗೆಲುವಿನಿಂದ ತಂದೆಯ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ ಎಂದು ಉಮೇಶ್ ಮೇಟಿ ಸಹೋದರ ಮಲ್ಲಿಕಾರ್ಜುನ ಮೇಟಿ ಹೇಳಿದ್ದಾರೆ. ಮತದಾರರು ಮತ್ತೊಮ್ಮೆ ನಮ್ಮ ಕುಟುಂಬದ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬಾಗಲಕೋಟೆ ಉಪಚುನಾವಣೆ ಫಲಿತಾಂಶದೊಂದಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಹಿಡಿತವನ್ನು ಮತ್ತೊಮ್ಮೆ ಸ್ಥಿರಪಡಿಸಿಕೊಂಡಿದೆ.

